ಆತ್ಮ ನಿರೀಕ್ಷಣೆ ಮೂಲಕ ಉನ್ನತಿ ಸಾಧಿಸಿದ ಶರಣರು

| Published : Jul 27 2025, 12:01 AM IST

ಆತ್ಮ ನಿರೀಕ್ಷಣೆ ಮೂಲಕ ಉನ್ನತಿ ಸಾಧಿಸಿದ ಶರಣರು
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ ಮಾಡುವ ಲಿಂಗ ಪೂಜೆ, ಮಂತ್ರ ಪಠಣ, ವಚನ ಪಠಣಗಳು ಸದ್ಗತಿಯ ಸಾಧನಗಳಾಗಿವೆ

ಹಾವೇರಿ: ಶರಣರು ಮನೋವಿಜ್ಞಾನ ಬಲ್ಲವರಾಗಿದ್ದು, ಶಿವಯೋಗದ ಮೂಲಕ ಆತ್ಮ ನಿರೀಕ್ಷಣೆ ಮಾಡಿ ಉನ್ನತಿ ಸಾಧಿಸಿದ್ದರು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದಲ್ಲಿ ಕೆ.ಎಂ. ಬಿಜಾಪುರ ಅವರ ಮನೆಯಲ್ಲಿ ಬಸವ ಬಳಗ ಮತ್ತು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಿತ್ಯ ಮಾಡುವ ಲಿಂಗ ಪೂಜೆ, ಮಂತ್ರ ಪಠಣ, ವಚನ ಪಠಣಗಳು ಸದ್ಗತಿಯ ಸಾಧನಗಳಾಗಿವೆ. ಆಹಾರ ಸೇವಿಸುವಾಗ ಭಗವಂತನ ಸ್ಮರಣೆ ಮಾಡುತ್ತಾ ಸೇವಿಸಿದರೆ ಅದು ಪ್ರಸಾದವಾಗುತ್ತದೆ. ಶರಣ ತತ್ವಗಳ ಅನುಷ್ಠಾನದಿಂದ ನಮ್ಮ ಕಾಯವೇ ಕೈಲಾಸವಾಗುತ್ತದೆ ಎಂದರು.

ಕೂಡಲ ಗುರುನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವುಗಳು ಅನುಭವ ಮಂಟಪ ಕಣ್ಣಾರೆ ನೋಡಿಲ್ಲ, ಆದರೆ ಶರಣರ ಬದುಕು ಬರಹ ಮತ್ತು ವಚನಗಳ ಚಿಂತನ ಮಂಥನಗಳ ಕಾರ್ಯ ಮೇಲಿಂದ ಮೇಲೆ ಮಾಡುವುದರ ಮೂಲಕ ಅನುಭವ ಮಂಟಪ ಕಾಣಬಹುದಾಗಿದೆ. ಬಹಿರಂಗದ ಬದಲಾವಣೆಯೊಂದಿಗೆ ನಮ್ಮ ಅಂತರಂಗದ ಬದಲಾವಣೆ ಕೂಡ ಆಗಬೇಕಾಗಿದ್ದು ಶರಣರ ವಚನಗಳ ಸತತ ಅಭ್ಯಾಸದಿಂದ ಇದು ಸಾಧ್ಯವಾಗಲಿದೆ. ಮಕ್ಕಳ ಮನಸ್ಸಿನಾಳಕ್ಕೆ ವಚನಗಳನ್ನು ನೀಡುವುದು ಇಂದಿನ ಅವಶ್ಯಕತೆ ಆಗಿದೆ ಎಂದರು.

ಚಿಕ್ಕಬಾಸೂರಿನ ಪದವಿ ಕಾಲೇಜಿನ ಪ್ರಾಧ್ಯಾಪಕಿ ಪುಷ್ಪಾವತಿ ಶಲವಡಿಮಠ ಮಾತನಾಡಿ, ಪ್ರಸ್ತುತ ಬೌದ್ಧಿಕ ಕಟ್ಟಡಗಳನ್ನು ಕಟ್ಟುವುದರ ಬದಲಾಗಿ ಮನಸ್ಸು ಕಟ್ಟುವ ಕೆಲಸವಾಗಬೇಕಿದೆ.ಈ ಕೆಲಸ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿ ಸಮಸಮಾಜದ ನಿರ್ಮಾತರಾದರು. ಬಸವಾದಿ ಶರಣರು ಜಗತ್ತಿಗೆ ನೀಡಿದ ಕಾಯಕ ದಾಸೋಹ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಶ್ರಾವಣ ಮಾಸದ ಒಂದು ತಿಂಗಳವರಿಗೆ ಹಾವೇರಿ ನಗರದ ಆಸಕ್ತರ ಮನೆಗಳಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ದೇಶ ಮತ್ತು ಶರಣರ ವಚನ ಸಾಹಿತ್ಯದ ಶ್ರೇಷ್ಠತೆ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪಿ.ಡಿ. ಶಿರೂರ, ಮಹೇಶ ಹಾವೇರಿ, ವೀರೇಶ ಮತ್ತಿಹಳ್ಳಿ, ನಾಗರಾಜ ಕುರುವತ್ತೇರ, ನಿಂಗಪ್ಪ ಪೂಜಾರ, ಶಂಕರ ಬಿಸರಳ್ಳಿ, ಕಿರಣ ಕೊಳ್ಳಿ, ಮಲ್ಲಿಕಾರ್ಜುನ ಅಗಡಿ, ಎಂ.ಬಿ.ಕಾಳೆ, ಪ್ರಭುಗೌಡ ಬಸನಗೌಡ, ಹೊಳೆಯಪ್ಪ ಸೂರದ, ಶಿವಣ್ಣ ಶಿರೂರ, ವಿರುಪಾಕ್ಷಪ್ಪ ಬಣಕಾರ, ಪ್ರಕಾಶ್ ಶೆಟ್ಟಿ, ಶಿವಬಸಪ್ಪ ಮುದ್ದಿ, ಮುರಿಗೆಪ್ಪ ಕಡೆಕೊಪ್ಪ, ಶಿವಯೋಗಿ ಬೆನ್ನೂರ, ಉಳಿವೆಪ್ಪ ಪಂಪಣ್ಣವರ, ಗಂಗಣ್ಣ ಮಾಸೂರ, ಮಾಂತೇಶ ಕರೆಮಣ್ಣವರ, ಬಸವರಾಜ ಕೋರಿ, ನಾಗೇಂದ್ರಪ್ಪ ಮಂಡಕ್ಕಿ, ಶಿವಾನಂದ ಹೊಸಮನಿ, ವಿ.ಎನ್. ಆಲದಕಟ್ಟಿ, ಬಸವರಾಜ ಓಂಕಾರಣ್ಣವರ, ಆರ್.ವಿ. ಹೆಗಡಾಳ, ಚೆನ್ನಪ್ಪ ಮಲ್ಲಾಡದ, ಮಾಲತೇಶ ಸೊಪ್ಪಿನ, ಚಂಪಾವತಿ ವಿಜಾಪುರ, ಲಲಿತಕ್ಕ ಹೊರಡಿ, ಅಮೃತಮ್ಮ ಶೀಲವಂತರ, ಚಂಪಾ ಹುಣಸಿಕಟ್ಟಿ, ಮಹದೇವಿ ಕಣವಿ ಇತರರು ಇದ್ದರು.

ಕಾವ್ಯ ಅಂಗಡಿ, ಶಶಿಕಲಾ ಕಾಯಕದ, ವಚನ ಪ್ರಾರ್ಥನೆ ಮಾಡಿದರು. ಅಕ್ಕಮಹಾದೇವಿ ವಿಜಾಪುರ ಸ್ವಾಗತಿಸಿದರು. ಬಳಗದ ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಕೆ.ಎಂ. ಬಿಜಾಪುರ ವಂದಿಸಿದರು.