ಸಾರಾಂಶ
ಕಲಬುರಗಿ : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಲಬುರಗಿಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು (90) ಲಿಂಗೈಕ್ಯರಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 9.23ಕ್ಕೆ ಅವರು ಲಿಂಗೈಕ್ಯರಾದರು.
ವಯೋಸಹಜವಾಗಿ ಕಾಡುತ್ತಿದ್ದ ಶ್ವಾಸಕೋಶ ತೊಂದರೆಯಿಂದಾಗಿ ಅವರನ್ನು ಕಳೆದ ಮೂರು ವಾರದ ಹಿಂದೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಡಾ.ಶರಣಬಸವಪ್ಪ ಅಪ್ಪಾ ಅವರ ಇಚ್ಛೆಯಂತೆ ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮಹಾ ಮನೆಗೆ ಸ್ಥಳಾಂತರಿಸಲಾಗಿತ್ತು. ಜೊತೆಗೆ, ಅಪ್ಪಾ ಇಚ್ಛೆಯಂತೆ ಕುಟುಂಬಸ್ಥರು ಶರಣಬಸವೇಶ್ವರರ ದೇವರ ದರ್ಶನ ಮಾಡಿಸಿದ್ದರು.
ದೇವರ ದರ್ಶನದ ಬಳಿಕ ದಾಸೋಹ ಮಹಾ ಮನೆಗೆ ಅಪ್ಪಾ ಅವರನ್ನ ಸ್ಥಳಾಂತರ ಮಾಡಲಾಗಿತ್ತು. ಮಹಾ ಮನೆಯಲ್ಲಿಯೇ ಡಾ.ಅಪ್ಪಾಗೆ ಚಿಕಿತ್ಸೆ, ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅಪ್ಪಾ ಅವರು ಲಿಂಗೈಕ್ಯರಾಗಿದ್ದಾರೆ. ಕಲಬುರಗಿ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿಯಾಗಿದ್ದ ಡಾ.ಶರಣಬಸಪ್ಪ ಅಪ್ಪ ಅವರು ಕಲಬುರಗಿಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಹೆಸರುವಾಸಿಯಾಗಿದ್ದರು. ಶರಣಬಸವೇಶ್ವರ ಸಂಸ್ಥಾನ, ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ, ದಾಸೋಹ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಡಾ.ಶರಣಬಸಪ್ಪ ಅಪ್ಪ ಅವರು 1988ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.ಮಠದ ಆವರಣದಲ್ಲಿ ಅಂತ್ಯಕ್ರಿಯೆ:
ದೇವಸ್ಥಾನದ ಮುಂಭಾಗದಲ್ಲಿಯೇ ಡಾ.ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಆಗಮನ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.