ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವಿರಬೇಕು

| Published : Sep 14 2025, 01:04 AM IST

ಸಾರಾಂಶ

ನಮ್ಮೊಳಗೆ ಅರಿವು ಬರಬೇಕೆಂದರೆ ನಾವು ಚೇತನವಾಗಬೇಕೆಂದು ಅಲ್ಲಮಪ್ರಭು ಪ್ರತಿಪಾದಿಸಿದ್ದಾರೆ

ಕನ್ನಡಪ್ರಭ ವಾರ್ತೆ ಹುಣಸೂರು ಅನ್ನ ಮತ್ತು ಜ್ಞಾನ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವಿರಬೇಕು ಎಂದು ನಗರದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ. ವಸಂತಕುಮಾರ್ ಅಭಿಪ್ರಾಯಪಟ್ಟರು.ತಾಲೂಕು ಶರಣ ಸಾಹಿತ್ಯ ಪರಿಷತ್, ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶರಣರ ವೈಚಾರಿಕತೆ ವಿದ್ಯಾರ್ಥಿಗಳೆಡೆಗೆ ಕಾರ್ಯಕ್ರಮದಲ್ಲಿ ಅಲ್ಲಮನ ವಚನಗಳಲ್ಲಿ ಅರಿವು ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.ನಮ್ಮೊಳಗೆ ಅರಿವು ಬರಬೇಕೆಂದರೆ ನಾವು ಚೇತನವಾಗಬೇಕೆಂದು ಅಲ್ಲಮಪ್ರಭು ಪ್ರತಿಪಾದಿಸಿದ್ದಾರೆ. ನಾವು ಕಲ್ಲಾದರೆ ನಮ್ಮ ಜೊತೆಯಿರುವವರೂ ಕಲ್ಲಾಗುತ್ತಾರೆ. ಶಿಲೆಯೊಳಗಿನ ಶಿಲ್ಪ ಹೊರಬರಲು ಅರಿವು ಎನ್ನುವ ಗುರು ಅಗತ್ಯ. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ, ಜ್ಞಾನ ಇರುತ್ತದೆ. ಹೊಟ್ಟೆ ಹಸಿದರೆ ಮಾತ್ರ ಬಾಯಿ ತೆರೆಯುತ್ತದೆ. ಶರೀರಕ್ಕೆ ಅನ್ನ ಅಗತ್ಯ, ಮನಸಿಗೆ ಜ್ಞಾನ ಅಗತ್ಯ. ಹಾಗಾಗಿಯೇ ಅಲ್ಲಮಪ್ರಭುವನ್ನು ಜ್ಙಾನಯೋಗಿ ಎನ್ನುತ್ತಾರೆ. ಅಂತೆಯೇ ಜ್ಞಾನದಾಹಿಗೆ ಮಾತ್ರ ಮೆದುಳು ತನ್ನ ಬಾಗಿಲನ್ನು ತೆರೆದು ಜ್ಞಾನವನ್ನು ಪಡೆದುಕೊಳ್ಳುತ್ತದೆ. ನಿಮ್ಮ ಹೃದಯ, ಮೆದುಳು ಮತ್ತು ಬುದ್ಧಿ ಜ್ಞಾನದ ಹಸಿವನ್ನು ನೀಗಿಸುವ ಕಾರ್ಯ ನಿಮ್ಮಿಂದಾಗಬೇಕೆಂದರು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ಅಲ್ಲಮಪ್ರಭು ಈ ಜಗತ್ತು ಕಂಡ ಅತ್ಯಂತ ದೊಡ್ಡ ದಾರ್ಶನಿಕ. ಅಲ್ಲಮನಂತಹ ಮತ್ತೊಬ್ಬ ಮೇಧಾವಿ ಕಾಣುತ್ತಿಲ್ಲ. ಅನುಭವಮಂಟಪದ ಶೂನ್ಯಪೀಠದ ಅಧಿಪತಿಯಾಗಿ ಎಲ್ಲ ವಚನಕಾರರನ್ನು ಪ್ರಶ್ನಿಸಿ ವಿಚಾರಮಂಥನ ನಡೆಸಿ ಸಂದೇಶ ನೀಡುತ್ತಿದ್ದನು. ಜನಸಾಮಾನ್ಯರಿಗಾಗಿ 12ನೇ ಶತಮಾನದ ವಚನಕಾರರು ಸಮಾನತೆಗಾಗಿ ನಡೆಸಿದ ಗಟ್ಟಿಯಾದ ಆಂದೋಲನ ಈವರೆಗೆ ಕಂಡಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಸಿ. ಸುರೇಶ್ ಮಾತನಾಡಿ, ಬುದ್ಧಕಾಲದಿಂದ ಆರಂಭಗೊಂಡು ಎಲ್ಲ ಸಾಮಾಜಿಕ, ಸಾಹಿತ್ಯಕ ಘಟನೆಗಳು, ಎಲ್ಲ ಮಹನೀಯರ ಕಾಲಘಟ್ಟದಲ್ಲೂ ಎಲ್ಲರನ್ನು ಒಂದಾಗಿಸುವ ಕಾರ್ಯ, ಸಮಾನತೆಯನ್ನು ಸಾರುವ ಸಂದೇಶವನ್ನೇ ನೀಡಿದ್ದು, ಅದರ ಅನುಷ್ಠಾನದಲ್ಲಿ ನಾವೆಲ್ಲರೂ ಎಡುವುತ್ತಿದ್ದೇವೆ ಎಂದರು.ಕಾರ್ಯಕ್ರಮವನ್ನು ಗಣ್ಯರು ರಾಗಿಯನ್ನು ಮೊರದಲ್ಲಿ ಬೀರುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸುವ ಮೂಲಕ ಈ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ಕನ್ನಡ ವಿಬಾಗದ ಸಹಾಯಕ ಪ್ರಾಧ್ಯಾಪಕ ಆರ್. ಕುಮಾರ್, ಡಾ.ಎಂ.ಆರ್. ರಾಶಿ, ಡಿ.ಸಿ. ಶಿಲ್ಪಾ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.