ಲಕ್ಷ್ಮೇಶ್ವರ: ೧೨ನೇ ಶತಮಾನದ ಶರಣರು ವಚನಗಳ ಮೂಲಕ ಕನ್ನಡ ಹಾಗೂ ಕನ್ನಡ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶರಣರು ಸಾಮಾಜಿಕ ಕ್ರಾಂತಿ ಮೂಲಕ ಸಮಾಜದಲ್ಲಿನ ಅಂಧಶ್ರದ್ಧೆ, ಮೂಢನಂಬಿಕೆ ಕಿತ್ತೊಗೆಯುವ ಕಾರ್ಯ ಮಾಡಿದರು ಎಂದು ತಾಲೂಕು ಗ್ರಾಮೀಣ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಂ. ಮರಿಗೌಡರ ತಿಳಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಪಟ್ಟಣದ ಈಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಭಾನುವಾರ ಚನಬಸಪ್ಪ ರುದ್ರಪ್ಪ ಅಳಗವಾಡಿ ಹಾಗೂ ಗೌರಮ್ಮ ಚನಬಸಪ್ಪ ಅಳಗವಾಡಿ ಅವರ ಸ್ಮರಣಾರ್ಥ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಕುಂತಲಾ ಅಳಗವಾಡಿ ಅವರು ಕೊಡಮಾಡಿದ ದತ್ತಿ ಉಪನ್ಯಾಸ ನೀಡಿ ಮಾತನಾಡಿದರು. ಶರಣರು ವಚನಗಳ ಮೂಲಕ ಆಧ್ಯಾತ್ಮಿಕ ಲೋಕಕ್ಕೆ ಹೋಗುವ ಸರಳ ಸುಂದರ ದಾರಿಯನ್ನು ತೋರಿಸಿದ್ದು ನಮಗೆಲ್ಲ ಹೆಮ್ಮೆ ತರುವ ಸಂಗತಿಯಾಗಿದೆ. ಕಿರಿದಾದ ನುಡಿಗಳ ಮೂಲಕ ಹಿರಿದಾದ ಅರ್ಥವನ್ನು ಶರಣರ ವಚನಗಳು ಹೇಳುತ್ತಿವೆ. ೧೨ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶರಣರು ನಾಂದಿ ಹಾಡಿದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಕನ್ನಡ ನಾಡಿನ ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಶರಣರ ವಚನಗಳ ಜಗತ್ತಿನ ಬೇರೆ ಭಾಷೆಯಲ್ಲಿ ಇರದಂಥ ವಿಶಿಷ್ಟ ಸಾಹಿತ್ಯಿಕ ಮೌಲ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಶರಣರು ವಚನಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಸಂಸ್ಕೃತಿ, ಸಂಪ್ರದಾಯ, ನೈತಿಕ ಮೌಲ್ಯಗಳನ್ನು ಬೆಳವಣಿಗೆಗ ಪ್ರೋತ್ಸಾಹ ನೀಡಬೇಕು ಎಂದರು. ಈ ವೇಳೆ ಲಕ್ಷ್ಮೇಶ್ವರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಅಶ್ವಿನಿ ಅಂಕಲಕೋಟಿ, ಚಂಬಣ್ಣ ಬಾಳಿಕಾಯಿ, ಅಶೋಕ ಸೊರಟೂರ, ಶಕುಂತಲಾ ಅಳಗವಾಡಿ ಮಾತನಾಡಿದರು. ಹಿರಿಯ ನಾಗರಿಕರ ವೇದಿಕೆಯ ಆದ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಎಸ್.ಎಸ್. ಪೂಜಾರ, ನಿರ್ಮಲಾ ಅರಳಿ ಎಂ.ಕೆ. ಕಳ್ಳಿಮಠ, ಗೊರವರ, ಬಸವರಾಜ ಸಂಗಪ್ಪಶೆಟ್ಟರ, ಎಂ.ಕೆ. ಕಳ್ಳಿಮಠ, ಡಾ. ಹೂವಿನ, ನಾಗರಾಜ ಹೇಮಗಿರಿಮಠ ಹಾಗೂ ಅಳಗವಾಡಿ ಕುಟುಂಬದ ಸದಸ್ಯರು ಇದ್ದರು. ಮಾಲಾದೇವಿ ದಂದರಗಿ ಹಾಗೂ ಮಹಾನಂದಾ ಕೊಣ್ಣೂರ ಕಾರ್ಯಕ್ರಮ ನಿರ್ವಹಿಸಿದರು. ಈರಣ್ಣ ಮಡಿವಾಳರ ವಂದಿಸಿದರು. ಈ ವೇಳೆ ಕಾಶಿಯಾತ್ರೆ ಕೈಗೊಂಡ ಯಾತ್ರಾರ್ಥಿಗಳನ್ನು ಸನ್ಮಾನಿಸಲಾಯಿತು.