ಸಾರಾಂಶ
ಶರಣರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಯಲಬುರ್ಗಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಮೆಹಬೂಬ್ ಬಾದಶಹ ಹೇಳಿದರು.
ಕುಕನೂರು: ಶರಣರ ತತ್ವಾದರ್ಶಗಳಿಂದ ಸಾತ್ವಿಕ ಬದುಕು ಸಾಧ್ಯವಾಗುತ್ತದೆ ಎಂದು ಯಲಬುರ್ಗಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಮೆಹಬೂಬ್ ಬಾದಶಹ ಹೇಳಿದರು.
ತಾಲೂಕಿನ ಸಿದ್ನೇಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗದಿಂದ ಜರುಗಿದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಶರಣರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಶರಣರು ತಮ್ಮ ಜೀವನವನ್ನು ಸಾತ್ವಿಕ ಬದುಕಿಗೆ ಮೂಡಿಪಾಗಿಟ್ಟು, ಸಮಾಜದ ಸ್ಥಿರತೆಗೆ ಶ್ರಮಿಸಿದವರು. ಅವರ ತತ್ವ, ಆದರ್ಶಗಳು ಅನುಭವದ ಸಾರಗಳು ಎಂದರು.ಶಿಕ್ಷಕ ಸತ್ಯನಾರಾಯಣ ಪತ್ತಾರ ಮಾತನಾಡಿ, ಬಸವೇಶ್ವರರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಹೇಮರಡ್ಡಿ ಮಲ್ಲಮ್ಮ ತಾಳ್ಮೆಯ ಪ್ರತೀಕ. ಆಕೆಯ ಬದುಕು ತಾಳ್ಮೆಯಿಂದ ಬದುಕಿ ಎಂಬುದಕ್ಕೆ ಆದರ್ಶವಾಗಿದೆ ಎಂದರು.
ಬಿನ್ನಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಿವಕುಮಾರ ಹೊಸಮನಿ ಮಾತನಾಡಿ, ವಿಶ್ವಬಂಧು ಬಳಗ ಸುಗಂಧದ ರೀತಿಯಲ್ಲಿ ತನ್ನ ಪರಿಮಳ ಪಸರಿಸುತ್ತಿದೆ ಎಂದರು.ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಸಮರ್ಪಣಾ ಮನೋಭಾವದ ತಂಡದಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಶರಣಯ್ಯ ಹಿರೇಮಠ, ಮುಖ್ಯ ಶಿಕ್ಷಕ ಶೇಖಪ್ಪ ಗದಗ ಮಾತನಾಡಿದರು. ಮುಖ್ಯ ಶಿಕ್ಷಕ ಶೇಖಪ್ಪ ಗದಗ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಬೀಡನಾಳ, ಸಿಆರ್‌ಪಿ ಶಿವಕುಮಾರ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಉಸ್ತುವಾರಿ ಶಿವಕುಮಾರ ಹೊಂಬಳ ಅವರಿಗೆ ಸವಿನೆನಪಿನ ಕಾಣಿಕೆ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಮಂಜುನಾಥ ಕೊಡಕೇರಿ ಸ್ವಾಗತಿಸಿದರು. ಶಿವಕುಮಾರ ಹೊಂಬಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಮೇಶ ಚಿಂತಾಮಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರಭು ಶಿವನಗೌಡ್ರ, ಮಂಜುನಾಥ ಮನ್ನಾಪುರ, ಆನಂದ ಕೆರಳ್ಳಿ, ಸಿದ್ರಾಮಪ್ಪ ತಿಪ್ಪರಸನಾಳ, ಶಿವಕುಮಾರ ಮುತ್ತಾಳ ಇತರರಿದ್ದರು.