ಮಾನವೀಯ ಮೌಲ್ಯ ಸೌಹಾರ್ದ ಸಾಮರಸ್ಯ ಸಾರುವ ವಚನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾಯಕ ಶಸಾಪ ಮಾಡಲಿ
ಹೂವಿನಹಡಗಲಿ: ವಚನಕಾರರು, ಶರಣ ಸಂತರು ತಮ್ಮ ವಚನಗಳ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಬಿತ್ತಿದ್ದಾರೆ ಎಂದು ಶಿಕ್ಷಕ ಪಿ.ಎಂ. ಕೊಟ್ರಸ್ವಾಮಿ ಹೇಳಿದರು.
ಪಟ್ಟಣದ ಗವಿಮಠದ ಸಭಾಂಗಣದಲ್ಲಿ ಇಲ್ಲಿನ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಶಸಾಪ ಯುವ ಘಟಕದಿಂದ ಆಯೋಜಿಸಿದ್ದ ವಿವಿಧ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಾಯಕ ದೀಕ್ಷೆ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ವೈಚಾರಿಕತೆ ಕುರಿತು ಮಾತನಾಡಿದರು.12ನೇ ಶತಮಾನದಲ್ಲಿ ಅಲ್ಲಮ ಪ್ರಭು, ಬಸವಣ್ಣ, ಸರ್ವಜ್ಞ, ಆಯ್ದಕ್ಕಿ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ ಮೊದಲಾದ ವಚನಕಾರರು ರಚಿಸಿದ ವಚನಗಳು ಇಂದಿಗೂ ಮಹತ್ವ ಪಡೆದುಕೊಂಡಿವೆ. ವಚನಕಾರರು ಮನುಷ್ಯರಲ್ಲಿ ದೇವರನ್ನು ಕಂಡು ಕೊಂಡರು ಎಂದು ತಿಳಿಸಿದರು.
ಭಯೋತ್ಪಾದನೆ ಜಾಗತಿಕ ಹಿಂಸೆ ನೋವಿಗೆ ವಚನ ಸಾಹಿತ್ಯ ಶರಣ ಸಾಹಿತ್ಯಕ್ಕೆ ಚಿಕಿತ್ಸೆ ಗುಣವಿದೆ. ಮಾನವೀಯ ಮೌಲ್ಯ ಸೌಹಾರ್ದ ಸಾಮರಸ್ಯ ಸಾರುವ ವಚನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾಯಕ ಶಸಾಪ ಮಾಡಲಿ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ನಾಗತಿ ಬಸಾಪುರದ ಸದ್ಗುರು ಶಿವಯೋಗಿ ಡಾ. ಮಂಜುನಾಥ ಹಾಲಸ್ವಾಮಿ ಮಾತನಾಡಿ, ಮನೆ ಮನೆಗಳಿಗೆ ವಚನ ಸಾಹಿತ್ಯ ತಲುಪಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದು ತಿಳಿಸಿದರು.
ಮೈನಹಳ್ಳಿ ಸಿದ್ದೇಶ್ವರ ಮಠದ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಸಂಸ್ಕೃತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಹೇಳಿದರು.ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ನಾಗತಿ ಬಸಾಪುರದ ಸದ್ಗುರು ಶಿವಯೋಗಿ ಡಾ. ಮಂಜುನಾಥ ಹಾಲಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪ್ರಾಂಶುಪಾಲ ಡಾ.ಕೆ. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ, ಮಲ್ಲಿಗೆ ಪ್ರಕಾಶನದ ಎಲ್.ಖಾದರ್ ಬಾಷಾ, ಪಟ್ಟಣದ ಶಿಕ್ಷಣ ಸಂಯೋಜಕ ವೀರೇಶ್ ಬಗಲಿ ಮಾತನಾಡಿದರು.
ಸಾಹಿತಿ ತೋಮ ಶಂಕ್ರಯ್ಯ, ಕವಯಿತ್ರಿ ನಾಗಮಂಜುಳಾ ಜೈನ್, ಎಚ್.ಬಿ. ರಾಜೇಶ್, ನಿವೃತ್ತ ಉಪನ್ಯಾಸಕ ದಯಾನಂದ ಸ್ವಾಮಿ, ಶಸಾಪ ಅಧ್ಯಕ್ಷ ಟಿ.ಎಂ. ನಾಗಭೂಷಣ, ಸುಭಾಸ ಚಂದ್ರ ಹೊಳಲು, ನಾಗರಾಜ್ ಮಲ್ಕಿಒಡೆಯರ್ ಸೇರಿದಂತೆ ಇತರರಿದ್ದರು.ಆದ್ಯ ಸೊನ್ನದ, ದೀಕ್ಷಾ ಸೊನ್ನದ ವಚನ ಪ್ರಸ್ತುತ ಪಡಿಸಿದರು. ಯುವರಾಜಗೌಡ್ರು, ಸುನೀತಾ ನಟರಾಜಗೌಡ, ಎಂ.ಎಂ. ಗೌರಮ್ಮ, ಡಾ. ಶೈಲಜಾ ಪವಾಡಶೆಟ್ರು, ರಾಜೇಶ್ವರಿ ಕಮ್ಮಾರ ನಿರ್ವಹಿಸಿದರು.