ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸಾಲೂರು ಶ್ರೀ ಡಾ. ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ಆಯುಧ ಪೂಜೆ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು. ಶರನ್ನವರಾತ್ರಿಯ ನವಮಿ ದಿನ ಶ್ರೀಮಠದ ವತಿಯಿಂದ ಮಹದೇಶ್ವರರ ಸನ್ನಿಧಾನಕ್ಕೆ ಸಂಪ್ರದಾಯದಂತೆ ಪಡಿತರ ಸೇವೆಯನ್ನು ಸಲ್ಲಿಸಿದರು.ಬೇಡಗಂಪಣರು ಅರ್ಚಕರು ಮಡಿವಸ್ತ್ರ ಧರಿಸಿ ಸ್ವಾಮಿಯ ಪಟ್ಟದ ಕತ್ತಿ, ಆಯುಧಗಳನ್ನು ಹೊತ್ತು ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ, ನಂದಿ ಧ್ವಜಕಂಬ, ತಮಟೆ, ನಗಾರಿ, ಜಾಗಟೆ ಹಾಗೂ ಮಂಗಳ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಪಟ್ಟದ ಕತ್ತಿ, ಖಡ್ಗಗಳು, ಗಂಡು ಗುಂಡಲಿ, ಎಡಮುರಿ, ಬಲಮರಿ ಹಾಗೂ ಇನ್ನಿತರೆ ಆಯುಧಗಳನ್ನಿಟ್ಟು ಬ್ರಹ್ಮಸ್ತೋತ್ರದ ಪೂಜೆಯ ಜತೆಗೆ ಸಂಪ್ರಾದಾಯಿಕವಾಗಿ ಪೂಜೆಯನ್ನು ಸಂಭ್ರಮ ಸಡಗರದೊಂದಿಗೆ ನೆರವೇರಿಸಲಾಯಿತು.
ಮಹಾಮಂಗಳಾರತಿ ವಿಶೇಷ ಪೂಜೆ:ಸ್ವಾಮಿಗೆ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಕಂಕಣ ಕಟ್ಟಿಸಿಕೊಂಡ ಬೇಡಗಂಪಣ ಅರ್ಚಕರು ವಿವಿಧ ಆರತಿ ಸೇವೆಗಳನ್ನು ನೆರವೇರಿಸಿ, ಬಳಿಕ ಆಯುಧಗಳನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿ 3 ಸುತ್ತು ಸುತ್ತು ಪ್ರದಕ್ಷಿಣೆ ಹಾಕಿದರು. ದಕ್ಷಿಣದ್ವಾರದ ಮಹಾಗಣಪತಿ ಸನ್ನಿಧಿಯಲ್ಲಿ ಮಂಗಳಾರತಿ ಬೆಳಗಿಸಿ ಬೂದುಕುಂಬಳಕಾಯಿ ಹೊಡೆದು ದೃಷ್ಟಿ ತೆಗೆಯಲಾಯಿತು. ಬಳಿಕ ಪಟ್ಟದ ಉಯ್ಯಾಲೆ ಮಂಟಪದಲ್ಲಿ ಆಯುಧ ಗಳನ್ನಿರಿಸಿ ಅಷ್ಟೋತ್ತರ ಸಹಿತಆರತಿ ಹಾಗೂ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ. ಇದೇ ವೇಳೆ ಉಮಾ ಮಹೇಶ್ವರರ ಉತ್ಸವ ಹುಲಿವಾಹನ, ಬಸವ ವಾಹನ ಉತ್ಸವಗಳು ನಡೆಯಿತು, ವೀರಭದ್ರ ಸ್ವಾಮಿ, ಬಂಡಳ್ಳಿ ಬಸವ, ಗಾಳಿ ಬಸವೇಶ್ವರ ವಿಗ್ರಹಮೂರ್ತಿ, ಬೆಳ್ಳಿಸತ್ತಿಗೆ, ದೊಡ್ಡ ಸತ್ತಿಗೆ ಹಾಗೂ ನಂದಿ ಕಂಬಗಳಿಗೂ ಪೂಜೆ ಸಲ್ಲಿಸಲಾಯಿತು ಇಲ್ಲಿ ಪಟ್ಟದ ಕತ್ತಿಯ ವಿಶೇಷವೇನೆಂದರೆ, ಕೊಂಗ ದೊರೆ ಯುದ್ಧದಲ್ಲಿ ಸೋತು ತನ್ನ ಕತ್ತಿಯನ್ನು ಮಹದೇಶ್ವರರಿಗೆ ಒಪ್ಪಿಸಿದ್ದ ಎನ್ನುವ ಇತಿಹಾಸವಿದೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಹಾಗೂ ಉಪ ಕಾರ್ಯದರ್ಶಿ ಚಂದ್ರಶೇಖರ್ ಮುಖಂಡರಾದ ಮುರುಗ ಸಹಾಯಕ ಸಬ್ ಇನ್ಸ್ಪೆಕ್ಟರ್ ಗೋವಿಂದರಾಜು ದೇವಾಲಯದ ಅಧಿಕಾರಿಗಳು ಹಾಗೂ, ಸಿಬ್ಬಂದಿ ವರ್ಗ, ಅರ್ಚಕರು, ಅಸಂಖ್ಯಾತ ಭಕ್ತರು ಉಪಸ್ಥಿತರಿದ್ದರು.