ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುವಂತಹ ಯೋಜನೆಗಳಿಗೆ ಪರಿಸರ ಇಲಾಖೆಗಳ ಪೂರ್ವಾನುಮತಿ ಇಲ್ಲದೇ, ಕೈಗೊಳ್ಳುವ ಯೋಜನೆಗಳನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಅನ್ವಯ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಅದು ಮುಗಿದ ಅಧ್ಯಾಯ ಎಂದು ಹೇಳಿದರು.

ಪರಿಸರ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಅಲ್ಲಿ ಯಾವುದೇ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ನಾಶವಾಗುವಂತಹ ಯೋಜನೆಗಳಿಗೆ ಅನುಮತಿ ನೀಡಕೂಡದು ಎಂದು ಜುಲೈ 29ರಂದು ಆದೇಶ ನೀಡಿದೆ. ಇದೊಂದು ಐತಿಹಾಸಿಕ ತೀರ್ಪು ಆಗಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಪಂಪ್ಡ್ ಸ್ಟೋರೇಜ್ ಯೋಜನೆಯೂ ಸೇರಿದಂತೆ ಬೇಸೂರಿನ ಅಣುವಿದ್ಯುತ್ ಯೋಜನೆಯೂ ಜಾರಿಯಾಗುವುದಿಲ್ಲ. ಒಂದು ಪಕ್ಷ ಇದನ್ನೂ ಮೀರಿ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಅನುಷ್ಠಾನ ಮಾಡಲು ಹೊರಟರೆ ಕೋರ್ಟ್ ನಿಂದನೆಯ ಕೇಸನ್ನು ದಾಖಲಿಸಬೇಕಾಗುತ್ತದೆ. ಈಗಾಗಲೇ ಇದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದರು.

ಏಳನೇ ಬಾರಿಗೆ ಗೆಜೆಟ್‌:


ರಾಷ್ಟ್ರಭಕ್ತರ ಬಳಗದ ಮತ್ತೋರ್ವ ಮುಖ್ಯಸ್ಥ ಶ್ರೀಕಾಂತ್ ಮಾತನಾಡಿ, ಕೇಂದ್ರ ಸರ್ಕಾರ ಕೂಡ ಏಳನೇ ಬಾರಿಗೆ ಗೆಜೆಟ್ ನೋಟೀಫಿಕೇಷನ್ ಹೊರಡಿಸಿದೆ. ದೇಶಾದ್ಯಂತ ಇಕೋ ಸೆನ್ಸಿಟೀವ್ ಜೋನ್ ಮತ್ತು ಇಕೋ ಸೆನ್ಸಿಟೀವ್ ಏರಿಯಾ (ಸೂಕ್ಷ್ಮಪ್ರದೇಶ) ಗಳ ಪಟ್ಟಿಯನ್ನು ಜಾರಿಗೊಳಿಸಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಬೇಸೂರು, ಹಾರೋಗೊಪ್ಪ, ತಲೆಕಳಲೆ ಕೂಡ ಸೇರಿದೆ. ಈ ಹಿನ್ನೆಲೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಅಣುವಿದ್ಯುತ್ ಸ್ಥಾವರ ಯೋಜನೆಗಳು ಈ ಪಟ್ಟಿಯಲ್ಲಿ ಇದ್ದು ಆದ್ದರಿಂದ ಇಲ್ಲಿ ಯಾವುದೇ ಯೋಜನೆಗಳನ್ನು ರೂಪಿಸುವುದು, ಜಾರಿಗೊಳಿಸುವುದು ಕಾಮಗಾರಿಗಳನ್ನು ಆರಂಭಿಸುವುದು, ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದರು.

ಇಷ್ಟಾದರೂ ರಾಜ್ಯದ ಮುಖ್ಯಮಂತ್ರಿ ಮತ್ತು ಇಂಧನ ಸಚಿವರು ಶರಾವತಿ ಪಂಪ್ಡ್ ಸ್ಟೋರೇಜನ್ನು ಜಾರಿಗೊಳಿಸುವುದಾಗಿ ಹೇಳಿಕೆ ನೀಡುತ್ತಿರುವುದು ರಾಜ್ಯದ ಜನತೆಗೆ ಹಾಗೂ ಕಾನೂನಿಗೆ ಎಸಗುತ್ತಿರುವ ದ್ರೋಹದ ಕೆಲಸವಾಗಿದೆ ಎಂದು ಟೀಕಿಸಿದರು.

ಆದ್ದರಿಂದ ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು ಮತ್ತು ರಾಜ್ಯ ಸರ್ಕಾರ ಈ ಯೋಜನೆಗಳಿಂದ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಂ.ಬಿ. ಕುಮಾರಸ್ವಾಮಿ, ಈ. ವಿಶ್ವಾಸ್, ವಿ.ರಾಜು, ಸಹನಾಮೂರ್ತಿ, ಸುಬ್ರಹ್ಮಣ್ಯ, ಹರ್ಷ, ಪ್ರಕಾಶ್, ರಮೇಶ್, ಗುರುಮೂರ್ತಿ, ಎಸ್.ಬಿ. ಅಶೋಕ್‌ಕುಮಾರ್ ಮತ್ತಿತರರಿದ್ದರು.

--

ಪೋಟೋ: 01ಎಸ್‌ಎಂಜಿಕೆಪಿ03

ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಮಾತನಾಡಿದರು.