ಶಾಲಾ ಅಭಿವೃದ್ಧಿಗೆ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಿ

| Published : Nov 16 2024, 12:37 AM IST

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಶಾಲೆಯ ಅಭಿವೃದ್ಧಿ ಬಗ್ಗೆ ಇರುವ ನಿರೀಕ್ಷೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.

ಗದಗ: ವಿದ್ಯಾರ್ಥಿಗಳಿಗೆ ತಾವು ಕಲಿಯುವ ಶಾಲೆಯ ಅಭಿವೃದ್ಧಿ ಕುರಿತು ಇರುವ ಅಭಿಪ್ರಾಯ, ಆಕಾಂಕ್ಷೆ ತಿಳಿದುಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮುಕ್ತ ವೇದಿಕೆ ಕಲ್ಪಿಸಲಾಗಿದೆ ಎಂದು ಜಿಪಂ ಸಿಇಒ ಭರತ್.ಎಸ್ ಹೇಳಿದರು.

ನಗರದ ಜಿಪಂ ಸಂಭಾಗಣದಲ್ಲಿ ಶುಕ್ರವಾರ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಮಕ್ಕಳ ಜಿಪಂ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಶಾಲೆಯ ಅಭಿವೃದ್ಧಿ ಬಗ್ಗೆ ಇರುವ ನಿರೀಕ್ಷೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಮಕ್ಕಳಿಗೆ ತಮ್ಮ ಶಾಲೆಯ ಅಭಿವೃದ್ಧಿ ಬಗ್ಗೆ ಪ್ರಶ್ನಿಸಲು ಸಂಪೂರ್ಣ ಅಧಿಕಾರ ಹಾಗೂ ಹಕ್ಕಿದ್ದು, ಶಾಲಾ ಶಿಕ್ಷಕರಿಗೆ ಅಧಿಕಾರಿಗಳಿಗೆ ತಮ್ಮ ಬೇಡಿಕೆ ಒತ್ತಾಯಿಸುವದನ್ನು ಬಿಡಬಾರದು. ಈ ಶಾಲಾ ಅವಧಿ ಅತ್ಯಂತ ಅಮೂಲ್ಯವಾದದ್ದು ಶಾಲೆಗೆ ಬೇರೆ ಬೇರೆ ಆರ್ಥಿಕ, ಸಾಮಾಜಿಕ ಹಿನ್ನೆಲೆಯಿಂದ ವಿದ್ಯಾರ್ಥಿಗಳು ಬರುತ್ತಾರೆ.ಈ ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ, ಆರ್ಥಿಕವಾಗಿ ಸರ್ವ ಸಮಾನತೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿರುವ ಪ್ರಜಾಪ್ರಭುತ್ವ ಕುರಿತು ವಿದ್ಯಾರ್ಥಿಗಳಿಗೆ ಆಸಕ್ತಿ ಆತ್ಮವಿಶ್ವಾಸ ಬರಲಿ ಎನ್ನುವ ಉದ್ದೇಶದಿಂದ ಈ ಸಭೆಯಲ್ಲಿ ವಿದ್ಯಾರ್ಥಿಗಳನ್ನೇ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಮಕ್ಕಳಿಗಾಗಿಯೇ ಇರುವ ಹಕ್ಕುಗಳನ್ನು ಎಲ್ಲರು ತಿಳಿದುಕೊಳ್ಳಬೇಕು. ತಮ್ಮ ಸುತ್ತಮುತ್ತ ಬಾಲ್ಯ ವಿವಾಹ, ಭಿಕ್ಷಾಟನೆ, ಮಕ್ಕಳ ಕಳ್ಳ ಸಾಗಾಟ ಇಂತಹ ಘಟನೆಗಳು ಕಂಡು ಬಂದರೆ ಅದರ ವಿರುದ್ಧ ಧ್ವನಿ ಎತ್ತಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಮಕ್ಕಳು ತಮ್ಮ ಹಕ್ಕು ಅರಿಯಬೇಕು, ಇಲಾಖೆಯ ಸಂಪೂರ್ಣ ಸವಲತ್ತು ಬಳಸಿಕೊಂಡು ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಕಡೆಗೆ ಗಮನ ಹರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ.ಜಿ ಮಾತನಾಡಿ, ಸಭೆ ವಿಶೇಷವಾಗಿದ್ದು, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಶಾಲಾ ಹಂತದಲ್ಲಿ ಅರಿವು ಮೂಡಿಸುವ ಕಾರ್ಯಗಾರ ಏರ್ಪಡಿಸಲಾಗುತ್ತದೆ ಹಾಗೂ ಯಾವುದೇ ತೊಂದರೆ ಇದ್ದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಲು ತಿಳಿಸಿದರು.

ಸಭೆಯಲ್ಲಿ ಮೇಘಾ ಪುರದ ಅಧ್ಯಕ್ಷೀಯ, ನೇತ್ರಾ ಕುಂಬಾರ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿ, ವಿವಿಧ ತಾಲೂಕಿನಿಂದ ಬಂದ ವಿದ್ಯಾರ್ಥಿಗಳು ಉತ್ಸುಕತೆಯಿಂದ ಅಪಾರ ಸಮಸ್ಯೆ, ಪರಿಹಾರ ಕ್ರಮ ವಿಷಯಗಳ ಕುರಿತು ವಿಷಯ ಮಂಡಿಸಿದರು. ಮಕ್ಕಳ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಅನುಸರಿಸಬಹುದಾದ ಕ್ರಮಗಳೆಡೆಗೆ ಆರೋಗ್ಯಕರ ಸಂವಾದ ಮತ್ತು ಚರ್ಚೆ ಜರುಗಿತು.

ಸಂವಾದ ಮತ್ತು ಚರ್ಚೆಯಲ್ಲಿ ಕೀರ್ತಿ ಕುಲಗೋಡ ಪ್ರಥಮ, ನೇತ್ರಾ ಕುಂಬಾರ ದ್ವಿತೀಯ, ಪೂಜಾ ಗಂಗಾವತಿ ತೃತೀಯ, ಮೇಘಾ ಪುರಸ ನಾಲ್ಕನೇ ಸ್ಥಾನ ಪಡೆದುಕೊಂಡರು, ವಿಜೇತರಿಗೆ ಜಿಪಂ ಸಿಇಒ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಸಭೆಯಲ್ಲಿ ಡಯಟ್ ಪ್ರಾ.ಜಿ.ಎಲ್. ಬಾರಟಕ್ಕಿ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಇದ್ದರು. ಎಂ.ಎಚ್. ಕಂಬಳಿ ಸ್ವಾಗತಿಸಿದರು. ಎಂ.ಎ. ಎರಗುಡಿ ನಿರೂಪಿಸಿದರು. ಶಿವಕುಮಾರ ಕುರಿ ವಂದಿಸಿದರು.