ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ವೈಯಕ್ತಿಕ ಹಿತಾಸಕ್ತಿಗಾಗಿ ಸಂಸ್ಥೆಗೆ ದ್ರೋಹ ಬಗೆಯಲು ಮುಂದಾದರೆ ಅಂತಹ ವ್ಯಕ್ತಿ ಸಂಸ್ಥೆಯಲ್ಲಿರಲು ಅರ್ಹರಲ್ಲ ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆಗೆ ಸೇರಿದ ನೆಹರು ನಗರದಲ್ಲಿರುವ ೪ ಎಕರೆ ಆಸ್ತಿಯನ್ನು ಸುತ್ತಮುತ್ತಲಿನ ಕೆಲವರು ಒತ್ತುವರಿ ಮಾಡಿದ್ದರು. ಅದನ್ನು ತೆರವುಗೊಳಿಸಲು ಹೋದಂತ ಸಂದರ್ಭ ನಮ್ಮ ಮೇಲೆಯೇ ಜೆಸಿಬಿ ದಾಳಿಗೆ ಮುಂದಾದರೂ ನಾವುಗಳು ಜಗ್ಗಲಿಲ್ಲ. ಕಾರಣ ಅದು ಅತ್ಯಂತ ಬೆಲೆ ಬಾಳುವ ಆಸ್ತಿಯಾಗಿದ್ದು ಒಂದಡಿ ಒತ್ತುವರಿಯಾಗದಂತೆ ಹಿಂದೆಯೇ ಹೋರಾಟ ನಡೆಸಿ ಆಸ್ತಿ ಉಳಿಸಿದ್ದೇವೆ ಎಂದರು.ಅದೇ ರೀತಿ ಎಲ್ಲರೂ ಸಂಸ್ಥೆಯ ಆಸ್ತಿಯನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಅದನ್ನು ಬಿಟ್ಟು ಮತ್ತು ಯಾವುದೇ ಸಹಕಾರ ಸಂಸ್ಥೆ ಉಳಿಯಲು ಅಲ್ಲಿನ ಷೇರುದಾರರೇ ಕಾರಣರಾಗುತ್ತಾರೆ. ಅಲ್ಲದೆ ನಮ್ಮ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಸ್ಥೆ ಇಂದು ಉತ್ತಮ ಮಟ್ಟಕ್ಕೆ ಬರಲು ಷೇರುದಾರರ ಸಹಕಾರ ಬಹುಮುಖ್ಯವಾಗಿದೆ. ನಾನು ನಿದೇಶಕನಾಗಿ ಬಂದ ಸಂದರ್ಭ ಸಂಸ್ಥೆ ದಿವಾಳಿ ಹಂತಕ್ಕೆ ತಲುಪಿತ್ತು. ಆ ಸಂದರ್ಭ ಅಂದಿನ ಆಡಳಿತ ಮಂಡಳಿಯವರೆಲ್ಲ ಸೇರಿ ಸರ್ಕಾರದಿಂದ ೧೦ ಲಕ್ಷ ಷೇರು ಹಣವನ್ನ ಸಂಸ್ಥೆಗೆ ತರುವ ಕೆಲಸವಾಗಿತ್ತು. ನಂತರ ನಿರ್ದೇಶಕರೇ ಸೇರಿ ಸ್ವಂತ ಬಂಡವಾಳ ಹಾಕಿ ಗೊಬ್ಬರ ವ್ಯಾಪಾರ ಪ್ರಾರಂಭಿಸುವ ಜತೆಗೆ ಸಂಸ್ಥೆಯ ವಾಣಿಜ್ಯ ಮಳಿಗೆ ನಿರ್ಮಿಸಿ ಮಳಿಗೆಗಳ ಬಾಡಿಗೆಯನ್ನು ಹಂತಹಂತವಾಗಿ ಹೆಚ್ಚು ಮಾಡಿ ಸಂಸ್ಥೆಯನ್ನು ಉತ್ತಮವಾಗಿ ಬೆಳೆಸುವ ಕೆಲಸ ಮಾಡಿದ್ದೇವೆ. ಅದರಂತೆ ಬಂದವರು ಸಂಸ್ಥೆಯನ್ನು ಬೆಳೆಸುವಂತ ಕೆಲಸ ಮಾಡಬೇಕು ಎಂದರು.ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಮ್ಮ ಗೋದಾಮಿನಲ್ಲಿ ಗೊಬ್ಬರ ಮಾರಾಟದಲ್ಲಿ ಯಾವುದೇ ದುಬಾರಿ ಬೆಲೆ ಪಡೆಯಲು ನಾವು ಸೂಚಿಸಿಲ್ಲ. ಷೇರುದಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಮ್ಮ ಗಮನಕ್ಕೆ ಬಾರದೆ ಆ ರೀತಿ ಘಟನೆ ನಡೆದಿದ್ದರೆ ಕ್ಷಮೆ ಕೇಳುತ್ತೇನೆ. ಸಂಘದ ಆಸ್ತಿ ಉಳಿಸುವ ವಿಚಾರದಲ್ಲಿ ಒಂದು ಅಡಿ ಒತ್ತುವರಿಗೆ ಬಿಡುವುದಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಅಲ್ಲಿ ಈ ಬಾರಿ ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶವಿದೆ. ಷೇರುದಾರರ ಹಾಗೂ ನಿರ್ದೇಶಕರ ಮತ್ತು ಸಿಬ್ಬಂದಿಯ ಸಹಕಾರದಿಂದ ಸಂಘ ೧೫ ಲಕ್ಷ ನಿವ್ವಳ ಲಾಭ ಪಡೆದಿದೆ ಎಂದರು.ಪ್ರಾಸ್ತಾವಿಕವಾಗಿ ಸಂಘದ ನಿರ್ದೇಶಕ ಲಕ್ಷ್ಮಣ್, ನಿರ್ದೇಶಕರಾದ ಎಸ್.ನಾಗೇಶ್, ಭುವನೇಶ್, ಭಾರತಿಗೌಡ ಮಾತನಾಡಿದರು. ನಿರ್ದೇಶಕರಾದ ಮಲ್ಲೇಗೌಡ, ಸೋಮೇಶ್. ಕುಮಾರ್, ಕಾಂತರಾಜು, ಜಾನಕಮ್ಮ, ಪ್ರಿಯಾಂಕ. ತೀರ್ಥಕುಮಾರ್, ಸಿಬ್ಬಂದಿ ದೀಪು, ರಾಧಾ, ಶುಭ, ಪ್ರಸನ್ನ ಸೇರಿದಂತೆ ಇತರರಿದ್ದರು.