ದ್ವೇಷವಿರದ ಪ್ರೀತಿ ಹಂಚುವುದೇ ವೀರಶೈವ ಲಿಂಗಾಯತ ಧರ್ಮದ ಮೂಲ ತತ್ವ

| Published : Mar 14 2025, 12:32 AM IST

ದ್ವೇಷವಿರದ ಪ್ರೀತಿ ಹಂಚುವುದೇ ವೀರಶೈವ ಲಿಂಗಾಯತ ಧರ್ಮದ ಮೂಲ ತತ್ವ
Share this Article
  • FB
  • TW
  • Linkdin
  • Email

ಸಾರಾಂಶ

ದ್ವೇಷವಿರದ ಪ್ರೀತಿ ಹಂಚುವುದೇ ವೀರಶೈವ ಲಿಂಗಾಯತ ಧರ್ಮದ ಮೂಲ ತತ್ವ. ಎಲ್ಲ ಸಮುದಾಯಗಳ ಜೊತೆ ಪ್ರೀತಿ-ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳುವವರೇ ನಿಜವಾದ ವೀರಶೈವ ಲಿಂಗಾಯತರು ಎನಿಸಿಕೊಳ್ಳುತ್ತಾರೆ.

ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಕಮ್ಮರಚೇಡು ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣಸ್ವಾಮಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ದ್ವೇಷವಿರದ ಪ್ರೀತಿ ಹಂಚುವುದೇ ವೀರಶೈವ ಲಿಂಗಾಯತ ಧರ್ಮದ ಮೂಲ ತತ್ವ. ಎಲ್ಲ ಸಮುದಾಯಗಳ ಜೊತೆ ಪ್ರೀತಿ-ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳುವವರೇ ನಿಜವಾದ ವೀರಶೈವ ಲಿಂಗಾಯತರು ಎನಿಸಿಕೊಳ್ಳುತ್ತಾರೆ ಎಂದು ಕಮ್ಮರಚೇಡು ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮದಿರದ ಸಭಾಂಗಣದಲ್ಲಿ ಬುಧವಾರ ರಾತ್ರಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತ, ಹಿಂದುಳಿದ, ಶೋಷಿತ ಸಮುದಾಯಗಳು ಮುನ್ನಲೆಗೆ ಬರಲು ವೀರಶೈವ ಲಿಂಗಾಯತರಾದವರು ತಮಗಾದ ಸಹಾಯ ಮಾಡಬೇಕು. ಬೇರೆಯವರ ಬೆಳವಣಿಗೆಯಲ್ಲಿ ಖುಷಿ ಕಂಡುಕೊಳ್ಳಬೇಕು.

ಈ ಕಾರಣಕ್ಕಾಗಿಯೇ ತುಮಕೂರು ಸಿದ್ಧಗಂಗಾಮಠ ಸೇರಿದಂತೆ ನಾಡಿನ ಅನೇಕ ಮಠ ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಎಲ್ಲ ಸಮುದಾಯಗಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿ ಸಲುಹಿದವು. ವೀರಶೈವ ಲಿಂಗಾಯತರಾದವರು ತಾವು ದುಡಿದ ಹಣದಲ್ಲಿ ಒಂತಿಷ್ಟು ಹಣವನ್ನು ಅಸಹಾಯಕರಿಗೆ ಸಹಾಯ ಮಾಡುವ ಗುಣವನ್ನು ಮೈಗೂಡಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಸ್ವಾಮಿಗಳಾದ ನಮಗೆ ಜಾತಿ, ಧರ್ಮದ ಹಂಗಿಲ್ಲ. ದಲಿತರು ಸೇರಿದಂತೆ ಎಲ್ಲ ಸಮುದಾಯಗಳ ಮನೆಗೆ ತೆರಳಿ ಶಿವಪೂಜೆ ಮಾಡಿಕೊಳ್ಳುತ್ತೇವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಹರಗಿನಡೋಣಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ, ಅಂತಾಪುರ ಪಂಡಿತ ಶರಣರು, ವೇದಮೂರ್ತಿ ಪಂಪಯ್ಯಶಾಸ್ತ್ರಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಕಾರ್ಯಕ್ರಮದಲ್ಲಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವೀರಶೈವ ಸಮಾಜದ ಸಾಧಕರಾದ ಸಹಕಾರ ಕ್ಷೇತ್ರದ ಚೊಕ್ಕ ಬಸವನಗೌಡ, ಶೈಕ್ಷಣಿಕ ಸಾಧಕ ಪಲ್ಲೇದ ಪಂಪಾಪತೆಪ್ಪ, ರೈತ ಹೋರಾಟಗಾರ ಜಿ.ಪುರುಷೋತ್ತಮಗೌಡ, ಸಾಹಿತ್ಯ ಕ್ಷೇತ್ರದ ಸಾಧಕ ಸಿ.ಎಂ.ವೀರಯ್ಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಪಂಪಯ್ಯಶಾಸ್ತ್ರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಮುನ್ನ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಕಂಚಿನ ಪುತ್ಥಳಿಯ ಮೆರವಣಿಗೆ ಜರುಗಿತು. ಮೇಯರ್ ಮುಲ್ಲಂಗಿ ನಂದೀಶ್ ಚಾಲನೆ ನೀಡಿದರು. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ವೀರಶೈವ ಲಿಂಗಾಯತ ಸಮಾಜದ ಗಣ್ಯರಾದ ಎನ್.ಅಯ್ಯಪ್ಪ, ಮಹೇಶ್ವರಸ್ವಾಮಿ, ಎಣ್ಣೆ ಎರಿಸ್ವಾಮಿ, ಅಲ್ಲಂ ಪ್ರಶಾಂತ್, ಚೋರನೂರು ಕೊಟ್ರಪ್ಪ, ಡಾ.ಮಹಿಪಾಲ್, ಎಸ್. ಮಲ್ಲನಗೌಡ, ದಂಡಿನ ಶಿವಾನಂದ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಪಂಚಾಕ್ಷರಪ್ಪ, ಚಾನಾಳ್ ಶೇಖರ್, ಮೃತ್ಯುಂಜಯಸ್ವಾಮಿ ಬಂಡ್ರಾಳು, ಗಂಗಾವತಿ ವೀರೇಶ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜನಪ್ರತಿನಿಧಿಗಳು ಬರದಿದ್ದರೆ ನಮಗೇನೂ ನಷ್ಟವಿಲ್ಲ:

ಬೇರೆಯವರ ಜಯಂತಿಗಳಲ್ಲಿ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಆದರೆ, ವೀರಶೈವ ಲಿಂಗಾಯತ ಸಮಾಜದ ರೇಣುಕಾ ಜಯಂತಿಯಲ್ಲಿ ಯಾವೊಬ್ಬ ಜನಪ್ರತಿನಿಧಿಗಳಿಲ್ಲ. ಅವರು ಬರದಿದ್ದರೆ ನಮಗೇನೂ ನಷ್ಟವಿಲ್ಲ. ಅವರಿಗೇ ನಷ್ಟ ಎಂದು ಶ್ರೀಕಲ್ಯಾಣಸ್ವಾಮಿ ಹೇಳಿದರು.

ಜನಪ್ರತಿನಿಧಿಗಳಿಗಿಂತಲೂ ಜನರು ಭಾಗವಹಿಸುವುದು ನಮಗೆ ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದೀರಿ. ಮುಂದಿನ ವರ್ಷ ಮತ್ತಷ್ಟೂ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜಯಂತಿ ಆಚರಿಸೋಣ ಎಂದರು.