ಸಾರಾಂಶ
ಬೆಳಗ್ಗೆ ಗಣಪತಿ ಪೂಜೆ, ಪಂಚದರ್ಗಾ ಹವನ, ಶ್ರೀ ಸೂಕ್ತ ಹವನ, ಲಕ್ಷ ಕುಂಕುಮಾರ್ಚನೆ ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು.
ಭಟ್ಕಳ: ತಾಲೂಕಿನ ಅಳ್ವೆಕೋಡಿಯ ದುರ್ಗಾರಪಮೇಶ್ವರಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಶುಕ್ರವಾರ ಉತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳ ಅಮೃತ ಹಸ್ತದಿಂದ ದೇವಿಗೆ ಬೆಳ್ಳಿಯ ಕಲಶದಿಂದ ಶತಕಲಶಾಭಿಷೇಕ ನಡೆಯಿತು.ಬೆಳಗ್ಗೆ ಗಣಪತಿ ಪೂಜೆ, ಪಂಚದರ್ಗಾ ಹವನ, ಶ್ರೀ ಸೂಕ್ತ ಹವನ, ಲಕ್ಷ ಕುಂಕುಮಾರ್ಚನೆ ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು.
ಸಂಜೆ ಸಾಮೂಹಿಕ ದುರ್ಗಾ ನಮಸ್ಕಾರ, ಭಜನಾ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಗುರುವಾರ ರಾತ್ರಿ ಪ್ರಾಣೇಶ ಬಳಗದವರಿಂದ ನಡೆದ ಹಾಸ್ಯ ಸಂಜೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮನ ರಂಜಿಸಿತು. ಜು. 9ರ ವರೆಗೂ ಉತ್ಸವ ನಡೆಯಲಿದ್ದು, ಶುಕ್ರವಾರ ಮತ್ತು ಶನಿವಾರ ರಾತ್ರಿ ಸಂತನ್ ಶುಕ್ಲ ಸ್ವರ ಸಪ್ತಕ ಮ್ಯೂಸಿಕ್ ಟ್ರಸ್ಟ್ ಮುಂಬೈ ಇವರ ಭಕ್ತಿ ಗಾಯನ ಭಕ್ತರ ಮನರಂಜಿಸಲಿದೆ.ಉತ್ಸವದ ಪ್ರಯುಕ್ತ ಅಳ್ವೆಕೋಡಿಯಲ್ಲಿ ಹಬ್ಬದ ವಾತಾವವರಣ ನಿರ್ಮಾಣವಾಗಿದೆ. ದಿನಂಪ್ರತಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಧರ್ಮದರ್ಶಿಗಳಾದ ನಾರಾಯಣ ದೈಮನೆ, ಹನುಮಂತ ನಾಯ್ಕ, ಅರವಿಂದ ಪೈ, ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ, ಆಡಳಿತ ಮಂಡಳಿಯ ಸದಸ್ಯರು, ಊರಿನ ಪ್ರಮುಖರು, ಸ್ವಯಂ ಸೇವಕರ ತಂಡ ಉತ್ತಮ ವ್ಯವಸ್ಥೆ ಕಲ್ಪಿಸಿದೆ.