ಜಾಜೂರು ಗ್ರಾಪಂ ನೂತನ ಅಧ್ಯಕ್ಷರಾಗಿ ವನಿತಾಬಾಯಿ ಶೇಖರ ನಾಯ್ಕ್

| Published : Jul 06 2024, 12:55 AM IST

ಸಾರಾಂಶ

ಜಾಜೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ವನಿತಾಬಾಯಿ ಶೇಖರನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 17 ಸದಸ್ಯರ ಬಲ ಹೊಂದಿರುವ ಜಾಜೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು , ನಿಕಟಪೂರ್ವ ಅಧ್ಯಕ್ಷೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಕಾರಣ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವನಿತಾಬಾಯಿ ಶೇಖರನಾಯ್ಕ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ವನಿತಾಬಾಯಿ ಶೇಖರನಾಯ್ಕ್ ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರ ಹೊರವಲಯದ ಜಾಜೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ವನಿತಾಬಾಯಿ ಶೇಖರನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 17 ಸದಸ್ಯರ ಬಲ ಹೊಂದಿರುವ ಜಾಜೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು , ನಿಕಟಪೂರ್ವ ಅಧ್ಯಕ್ಷರಾದ ವೀಣಾ ಉಮೇಶ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಕಾರಣ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಳೇ ಕಲ್ಲಾಯ್ಕನಹಳ್ಳಿ ತಾಂಡಾ ಗ್ರಾಮದ ವನಿತಾಬಾಯಿ ಶೇಖರನಾಯ್ಕ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ವನಿತಾಬಾಯಿ ಶೇಖರನಾಯ್ಕ್ ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು. ನೂತನ ಅಧ್ಯಕ್ಷೆ ವನಿತಾಬಾಯಿ ಶೇಖರನಾಯ್ಕ್ ಅವರನ್ನು ಅಭಿನಂದಿಸಿದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಶಾಸಕ ಕೆ. ಎಂ. ಶಿವಲಿಂಗೇಗೌಡ ಮಾತನಾಡಿ, ಅಧಿಕಾರ ಸ್ಥಾನಮಾನಗಳು ಒಲಿದು ಬಂದಾಗ ಅದನ್ನು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರ ಸೇವೆ ಮಾಡಬೇಕು, ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರ ವಿಶ್ವಾಸ ಪಡೆದುಕೊಂಡು ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸಬೇಕು. ಜಾಜೂರು ಗ್ರಾಮ ಪಂಚಾಯತಿಯು ನಗರಕ್ಕೆ ಹೊಂದಿಕೊಂಡಂತ್ತಿದ್ದು ಜವಾಬ್ದಾರಿಯುತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ಮಹಿಳೆಯರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುನ್ನೆಲೆಗೆ ಬರಬೇಕು ಎಂದರು. ನೂತನ ಅಧ್ಯಕ್ಷೆ ವನಿತಾಬಾಯಿ ಶೇಖರನಾಯ್ಕ್ ಮಾತನಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ನನಗೆ ಒಲಿದು ಬಂದಿರುವ ಒಂದು ಸುವರ್ಣಾವಕಾಶ, ಈ ಹಿನ್ನೆಲೆಯಲ್ಲಿ ನಾನು ಪ್ರತಿಯೊಬ್ಬ ಸದಸ್ಯರು ಹಾಗೂ ಈ ಹಿಂದೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿರುವ ಎಲ್ಲಾ ಹಿರಿಯರ ಸಲಹೆ ಸೂಚನೆಗಳನ್ನು ಪಡೆದು ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ, ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ನನಗೆ ಸಹಕರಿಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದರು. ಜಾಜೂರು ಗ್ರಾಮ ಪಂಚಾಯತಿಯ ಸದಸ್ಯರು, ಹಾಲಿ ಉಪಾಧ್ಯಕ್ಷ ಸಿದ್ದಪ್ಪ, ಪಿಡಿಒ ಬಾಲಕೃಷ್ಣ ನಾಯ್ಕ್ , ಮುಖಂಡರುಗಳಾದ ಎಚ್. ಎಲ್. ಶೇಖರ್ ನಾಯ್ಕ್ , ಶಶಿಧರ್ ಜಾಜೂರು, ಗಂಗಾಧರಪ್ಪ, ಮಾಜಿ ಉಪಾಧ್ಯಕ್ಷ ಸ್ವಾಮಿ ನಾಯ್ಕ್ , ಜೆ. ಸಿ. ಸಿದ್ದೇಶ್, ಲೋಕೇಶ್ ಕುಮಾರ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶೇಖರ್ ನಾಯ್ಕ್ , ಮಾಜಿ ಸದಸ್ಯೆ ಮಂಜುಳಾ ಬಾಯಿ, ಕಲ್ಲಾಯ್ಕನಹಳ್ಳಿ ಸಿದ್ದಪ್ಪ., ನಾಗತಿಹಳ್ಳಿ ಉಮೇಶ್ , ಓಂಕಾರಮೂರ್ತಿ, ಶ್ರೀನಿವಾಸ್ ಕಾಟೆಕೆರೆ, ಚಂದ್ರಶೇಖರನಾಯ್ಕ್, ಆನಂದ ನಾಯ್ಕ್ ಶಂಕರನಹಳ್ಳಿ , ಮಾಜಿ ಅಧ್ಯಕ್ಷ ಕುಮಾರ ನಾಯ್ಕ್, ಮುರುಂಡಿ ರೋಹಿತ್, ಅಂಬರೀಶ್ ಸಂಕೋಡನಹಳ್ಳಿ , ಮುರುಂಡಿ ಗ್ರಾ. ಪಂ. ಉಪಾಧ್ಯಕ್ಷ ಆನಂದ್, ಕಾಟೆಕೆರೆ ಸುನಿಲ್, ಸಿದ್ದಮಲ್ಲಪ್ಪ, ಉಮೇಶ್ ನಾಯ್ಕ್, ಸಾಕಿ ಮಂಜುನಾಥ್, ತಾಲ್ಲೂಕಿನ ಲಂಬಾಣಿ ಸಮುದಾಯದ ವಿವಿಧ ಮುಖಂಡರು, ಜಾಜೂರು ಹಾಗೂ ಹಳೇ ಕಲ್ಲಾಯ್ಕನಹಳ್ಳಿ ಗ್ರಾಮದವರು ಉಪಸ್ಥಿತರಿದ್ದರು.