ಸಾರಾಂಶ
ಮಳೆಗಾಲದ ವಿಪತ್ತು ನಿರ್ವಹಿಸಲು ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ವರ್ಷ ವಾಡಿಕೆಗಿಂತ ಶೇ.30ರಷ್ಟು ಹೆಚ್ಚು ಮಳೆಯಾಗಲಿದ್ದು, ಮಳೆಗಾಲದ ವಿಪತ್ತು ನಿರ್ವಹಿಸಲು ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಮನವಿ ಮಾಡಿದ್ದಾರೆ.ನಗರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಮಳೆಗಾಲ ವಿಪತ್ತು ನಿರ್ವಹಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಹಳೆಯ ಮತ್ತು ಮಣ್ಣಿನ ಮನೆಗಳು ಕುಸಿದು ಬೀಳುವ ಆತಂಕವಿರುತ್ತದೆ. ನಗರಸಭೆಯ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿಗಳು ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ. ಕೆಇಬಿ ಮತ್ತು ಅರಣ್ಯ ಇಲಾಖೆಯ ಸಹಾಕಾರ ದೊಂದಿಗೆ ವಿದ್ಯತ್ ವೈರ್‌ಗಳ ಮೇಲೆ ಬೆಳೆದಿರುವ ಮರಗಳ ರೆಂಬೆಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.ಸಾಂಕ್ರಾಮಿಕ ರೋಗಗಳು ಹರಡದಂತೆ ಡಿಡಿಟಿ ಸಿಂಪಡನೆ, ಫಾಗಿಂಗ್ ಮಾಡಲು ಸೂಚನೆ ನೀಡಲಾಗಿದೆ. ವಸತಿ ನಿಲಯಗಳ ಮುಖ್ಯಸ್ಥರು ಶುಚಿತ್ವ ಕಾಪಾಡಿಕೊಳ್ಳಲು ಮತ್ತು ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ನೋಡಲ್ ಅಧಿಕಾರಿಯೂ ಆದ ಲಕ್ಷ್ಮೀ ಅಷ್ಟಗಿ ವಿವರಿಸಿದರು.
ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ನಗರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಸಲಹೆ, ಸೂಚನೆ ನೀಡಿದರು. ವೇದಿಕೆಯಲ್ಲಿ ಎಇಇ ಕುಸುಮಾ ಸೊಪಡ್ಲ, ಕಚೇರಿ ವ್ಯವಸ್ಥಾಪಕಿ ಚಂದ್ರಮ್ಮ ಬೆಳ್ಳೂರ ಇದ್ದರು.