ಸಾರಾಂಶ
ಮನೆ ಕೆಲಸಾದಳು ಕಣ್ಣೂರು ರಸ್ತೆಯ ಶೋಭಾ ಡ್ರೀಮ್ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಮನಬಂದಂತೆ ಬಟ್ಟೆ ಸೆಳೆದಂತೆ ಎತ್ತಿ ಬಿಸಾಡಿ ಕ್ರೂರವಾಗಿ ಹತ್ಯೆಗೈದಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ಮನೆ ಕೆಲಸಾದಳು ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಮನಬಂದಂತೆ ಬಟ್ಟೆ ಸೆಳೆದಂತೆ ಎತ್ತಿ ಬಿಸಾಡಿ ಕ್ರೂರವಾಗಿ ಹತ್ಯೆಗೈದಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಣ್ಣೂರು ರಸ್ತೆಯ ಶೋಭಾ ಡ್ರೀಮ್ ಅಪಾರ್ಟ್‌ಮೆಂಟ್‌ನ ನಿರ್ದಯ ಮನೆಕೆಲಸದಾಳು ಪುಷ್ಪಲತಾ ಈ ಕೃತ್ಯ ಎಸಗಿದ್ದು, ಮನೆ ಮಾಲಿಕೆ ಕೆ.ಆರ್.ರಾಶಿಕಾ ದೂರಿನ ಮೇರೆಗೆ ಆಕೆಯನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಮನೆ ಮಾಲಿಕರು ಹೊರ ಹೋಗಿದ್ದಾಗ ನಾಯಿಯನ್ನು ಎಳೆತಂದು ಲಿಫ್ಟ್‌ನಲ್ಲಿ ಪುಷ್ಪಲತಾ ಕ್ರೌರ್ಯ ಮೆರೆದಿದ್ದಾಳೆ. ಕೆಲ ಹೊತ್ತಿನ ಬಳಿಕ ಮನೆ ಮಾಲಿಕರು ಮರಳಿದಾಗ ಹತ್ಯೆ ಕೃತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಸಿಟಿವಿಯಲ್ಲಿ ಸತ್ಯ ಬಯಲಿಗೆ:
ನಾವು ಮನೆಯಲ್ಲಿ 4 ವರ್ಷದಿಂದ ಗೂಸಿ ಎಂಬ ಹೆಸರಿನ ನಾಯಿ ಸಾಕಿದ್ದೇವು. ಕಳೆದ ತಿಂಗಳು ಈ ನಾಯಿಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ನೇಮಿಸಿಕೊಂಡಿದ್ದು, ಆಕೆಗೆ ಮಾಸಿಕ ₹23000 ಸಂಬಳ ನೀಡುತ್ತಿದ್ದೇವು. ನಮಗೆ ಏಕಾಏಕಿ ಭಾನುವಾರ ನಾಯಿ ಸತ್ತಿರುವುದಾಗಿ ಆಕೆ ಹೇಳಿದಳು. ಈ ವಿಷಯ ಕೇಳಿ ನಮಗೆ ಅರೆಕ್ಷಣ ಆಘಾತವಾಯಿತು. ಆರೋಗ್ಯವಾಗಿದ್ದ ನಾಯಿ ಹೇಗೆ ಹಠಾತ್ತಾಗಿ ಸಾವನ್ನಪ್ಪಿತು ಎಂದು ಕೇಳಿದಾಗ ಆಕೆ ಸಮಪರ್ಕ ಉತ್ತರ ನೀಡಲಿಲ್ಲ. ಈಕೆಯ ನಡೆವಳಿಕೆಯಿಂದ ನಮಗೆ ಸಂಶಯ ಮೂಡಿತು. ಕೊನೆಗೆ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ನಾಯಿನ್ನು ಎತ್ತಿಕೊಂಡು ನೆಲಕ್ಕೆ ಬಿಸಾಕಿ ಪುಷ್ಪಲತಾ ಹಲ್ಲೆ ನಡೆಸುವ ದೃಶ್ಯಾವಳಿ ಪತ್ತೆಯಾಯಿತು. ನಾಯಿಯನ್ನು ಆಕೆ ಭೀಕರವಾಗಿ ಕೊಂದಿದ್ದಾಳೆ. ಈಕೆ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರಾಶಿಕಾ ಆಗ್ರಹಿಸಿದ್ದಾರೆ.
ಕೋಪದಲ್ಲಿ ಹೊಡೆದು ಬಿಟ್ಟೆ:
ನನಗೆ ನಾಯಿ ಸಾಯಿಸುವ ಉದ್ದೇಶವಿರಲಿಲ್ಲ. ಎಳೆದಾಗ ಬರಲಿಲ್ಲ ಅಂತ ಹೊಡೆದೆ. ನಾನು ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ನನ್ನ ಗ್ರಹಚಾರ ಸರಿಯಿರಲಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಹೇಳಿವೆ.
ತಮಿಳುನಾಡು ಮೂಲ: ತಮಿಳುನಾಡು ಮೂಲದ ಪುಷ್ಪಲತಾ, ಖಾಸಗಿ ಏಜೆನ್ಸಿ ಮೂಲಕ ರಾಶಿಕಾ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಖಾಸಗಿ ಕಾಲೇಜಿನಲ್ಲಿ ಎಂಬಿಎ ಓದುತ್ತಿರುವ ಮಂಗಳೂರಿನ ರಾಶಿಕಾ, ಶ್ವಾನ ಪ್ರಿಯೆ ಆಗಿದ್ದಾಳೆ. ಹೀಗಾಗಿಯೇ ತನ್ನ ಮನೆಯಲ್ಲಿ ಆಕೆ ನಾಯಿ ಸಾಕಿದ್ದಳು. ಕಾಲೇಜಿಗೆ ಹೋದಾಗ ಅದರ ಪಾಲನೆಗೆ ಪುಷ್ಪಲತಾಳನ್ನು ನೇಮಿಸಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
;Resize=(690,390))
)

;Resize=(128,128))
;Resize=(128,128))
;Resize=(128,128))