ಸಾರಾಂಶ
ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಹಳೇಸೊರಬ ಗ್ರಾಮದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರಿಗೆ ಶೌಚಾಲಯವೇ ಇಲ್ಲವಾಗಿದೆ. ಬದಲಾಗಿ ಬಹಿರ್ದೆಸೆ ತೀರಿಸಿಕೊಳ್ಳಲು ತಗಡಿನ ಶೆಡ್ ಅವಲಂಭಿಸಬೇಕಾಗಿದೆ. ಈ ಮೂಲಕ ಪ್ರತಿ ದಿನ ಮಕ್ಕಳ ಮತ್ತು ಶಿಕ್ಷಕರ ಮಾನ ಹರಾಜಾಗುತ್ತಿದೆ.
ಪುರಸಭೆ ವ್ಯಾಪ್ತಿಗೆ ಒಳಪಡುವ, ಪಟ್ಟಣಕ್ಕೆ ಹೊಂದಿಕೊಂಡಿರುವ ಹಳೇಸೊರಬ ಗ್ರಾಮದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗೆ ೨೪೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯರು ಸೇರಿ ೧೦ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ೭ ಜನ ಶಿಕ್ಷಕಿಯರಿದ್ದಾರೆ. ಇವರಿಗೆ ಬಹಿರ್ದೆಸೆ ತೀರಿಸಿಕೊಳ್ಳಲು ಶೌಚಾಲಯವೇ ಇಲ್ಲ. ಬದಲಾಗಿ ಚೌಕಾಕಾರದಲ್ಲಿ ತಗಡಿನ ಶೆಡ್ ನಿರ್ಮಿಸಲಾಗಿದೆ. ಇದರಲ್ಲಿಯೇ ಬಹಿರ್ದೆಸೆ ತೀರಿಸಿಕೊಳ್ಳಬೇಕಿದೆ.ತಗಡಿನ ಶೆಡ್‌ಗೆ ಮುಖ್ಯವಾಗಿ ಮೇಲ್ಛಾವಣಿ ಇಲ್ಲ, ಬಾಗಿಲು ಕೂಡ ಇಲ್ಲ. ಯಾರಾದರೂ ನೋಡಿಯಾರು ಎನ್ನುವ ಆತಂಕದೊಂದಿಗೆ ಮಕ್ಕಳು ಮತ್ತು ಶಿಕ್ಷಕರು ಶೌಚಕ್ಕೆ ತೆರಳುವ ದುಸ್ಥಿತಿಯಲ್ಲಿದ್ದಾರೆ. ಅದರಲ್ಲೂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಮುಜುಗರಕೀಡಾಗುತ್ತಿದ್ದಾರೆ. ಶಾಲೆಯ ಆಜುಬಾಜಿನಲ್ಲಿ ಬಹು ಅಂತಸ್ತಿನ ಮಹಡಿ ಮನೆಗಳಿದ್ದು, ಮಹಡಿಯಿಂದ ವೀಕ್ಷಿಸಿದರೆ ಮೇಲ್ಛಾವಣಿ ಇಲ್ಲದ ತಗಡಿನ ಶೌಚಾಲಯದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳು ಕಾಣುತ್ತದೆ. ಈ ಕಾರಣದಿಂದ ಮೇಲ್ಛಾವಣಿ ಇಲ್ಲದ ತಗಡಿನ ಶೌಚಾಲಯ ಬಳಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದೂ ಕೂಡ ಅನಿವಾರ್ಯ ಸಂದರ್ಭದಲ್ಲಿ ಶೌಚಾಲಯವನ್ನು ಬಳಸಲೇಬೇಕಾಗಿದೆ. ತಾಲೂಕಿನ ಶಾಸಕರೇ ಶಿಕ್ಷಣ ಸಚಿವರಾಗಿದ್ದರೂ ಸಹ ತಗಡಿನ ಶೆಡ್ ನಿರ್ಮಿಸಿರುವುದು ಖಂಡನೀಯ. ಸರ್ಕಾರಕ್ಕೆ ಒತ್ತಡ ಹಾಕಿ ತಕ್ಷಣ ಅನುದಾನದ ಹಣ ಬಿಡುಗಡೆ ಮಾಡಿಸಿಕೊಳ್ಳಬೇಕಿರುವುದು ಸಚಿವರ ಜವಾಬ್ದಾರಿ. ಈಗಲಾದರೂ ಸುಸಜ್ಜಿತ ಶೌಚಾಲಯಕ್ಕೆ ಮುಂದಾಗಬೇಕಾಗಿದೆ ಎಂದು ಪೋಷಕ ವರ್ಗದವರು ಮನವಿ ಮಾಡಿದ್ದಾರೆ.
ಈ ಹಿಂದೆ ಖಾಸಗಿ ನಿವೇಶನದಲ್ಲಿ ಶಾಲೆಗೆ ಹೊಂದುಕೊಂಡಂತೆ ಶೌಚಾಲಯ ನಿರ್ಮಿಸಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿತ್ತು. ತೀರ್ಪು ಖಾಸಗಿ ವ್ಯಕ್ತಿಗಳ ಪರವಾಗಿ ಬಂದ ಕಾರಣ ಶೌಚಾಲಯವನ್ನು ನೆಲಸಮ ಮಾಡಲಾಯಿತು. ಕಳೆದ ೮ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಬಹಿರ್ದೆಸೆಗೆ ಸಮಸ್ಯೆಯಾದ ಕಾರಣ ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಚಂದಾ ಸಂಗ್ರಹಿಸಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದಾರೆ. ಆದರೆ ಇದಕ್ಕೆ ಮೇಲ್ಛಾವಣಿ ಮತ್ತು ಬಾಗಿಲು ಇಲ್ಲದ ಕಾರಣ ಇನ್ನಷ್ಟು ತಾಪತ್ರಯ ಎದುರಿಸುವಂತಾಗಿದೆ.ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಅನುದಾನದ ಹಣ ಬಿಡುಗಡೆಯಾಗಿಲ್ಲ. ಬದಲಾಗಿ ಅಧಿಕಾರಿಗಳು ಪುರಸಭೆಯಲ್ಲಿ ಬಳಕೆಯಾಗದ ಹಣ ನೀಡುವುದಾಗಿ ಗುತ್ತಿಗೆದಾರರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದರನ್ವಯ ಕಾಮಗಾರಿ ಪ್ರಾರಂಭಿಸಿ ಪೌಂಡೇಷನ್ ಮುಗಿದು ಆರು ತಿಂಗಳು ಕಳೆದಿದೆ. ಶೌಚಾಲಯದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲದ ಕಾರಣ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗದೇ ಕಾಮಗಾರಿ ಸ್ಥಗಿತಗೊಂಡಿದೆ.
ಸಚಿವರು ಕೂಡಲೇ ಶೌಚಾಲಯ ನಿರ್ಮಿಸಬೇಕುತಾಲೂಕಿನ ಸರ್ಕಾರಿ ಶಾಲೆಗೆ ಶೌಚಾಲಯವೇ ಇಲ್ಲವಾಗಿದೆ. ತುರ್ತಾಗಿ ತಗಡಿನ ಶೆಡ್ ನಿರ್ಮಿಸಲಾಗಿದೆ. ಆದರೆ ಇದು ಸಮರ್ಪಕವಾಗಿಲ್ಲ. ನೂತನ ಶೌಚಾಲಯದ ಪೌಂಡೇಷನ್ ಮುಗಿದು ಹಲವು ತಿಂಗಳುಗಳೇ ಆಗಿದೆ. ಮುಂದಿನ ಕಾಮಗಾರಿ ಪ್ರಾರಂಭವಾಗಿಲ್ಲ. ಕಾರಣ ಪುರಸಭೆಯಲ್ಲಿ ಯಾವುದೇ ಅನುದಾನದ ಹಣ ಇಲ್ಲ. ಕೂಡಲೇ ಅಧಿಕಾರಿಗಳು ಮತ್ತು ಸಚಿವರು ಗಮನಹರಿಸಿ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ವಕೀಲ ಶಿವಕುಮಾರ ಆಗ್ರಹಿಸಿದ್ದಾರೆ.
ಶಾಲೆ ಪುರಸಭೆ ವ್ಯಾಪ್ತಿಗೆ ಒಳಪಡುವುದರಿಂದ ಮೂಲಭೂತ ಸೌಕರ್ಯ ಒದಗಿಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಲ್ಲ. ಪುರಸಭೆ ಅಧಿಕಾರಿಗಳು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.ಪುಷ್ಪಾ ಬಿಇಒ, ಸೊರಬ.
ಶಾಲೆಗೆ ೧೮ ಲಕ್ಷ ರು. ವೆಚ್ಚದಲ್ಲಿ ಗುಣಮಟ್ಟದ ಶೌಚಾಲಯ ನಿರ್ಮಿಸಲು ಈಗಾಗಲೇ ಸರ್ಕಾರಕ್ಕೆ ಎಸ್ಟಿಮೆಟ್ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾಮಗಾರಿ ಪ್ರಾರಂಭಗೊಂಡು ಪೌಂಡೇಷನ್ ಕೂಡ ಮುಗಿದಿದೆ. ಪಿಲ್ಲರ್ ನಿರ್ಮಿಸಿ, ಗೋಡೆ ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ. ಶೀಘ್ರದಲ್ಲಿಯೇ ಸಂಪೂರ್ಣಗೊಳ್ಳುವುದು.ಎಚ್.ವಿ. ಚಂದನ್ ಮುಖ್ಯಾಧಿಕಾರಿ, ಪುರಸಭೆ, ಸೊರಬ
;Resize=(128,128))
;Resize=(128,128))