ಸಾರಾಂಶ
ಶುಕ್ರವಾರ ಸಂತೆಯಲ್ಲಿ ₹10 ಕೋಟಿ ವ್ಯವಹಾರ । ಒಂದೊಂದು ಕುರಿ 5 ರಿಂದ 30 ಸಾವಿರಕ್ಕೆ ಮಾರಾಟ
ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರನಗರದ ಎಪಿಎಂಸಿ ಆವರಣದಲ್ಲಿ ಬಕ್ರೀದ್ ಹಬ್ಬವಿರುವ ಕಾರಣ ಶುಕ್ರವಾರ ನಡೆದ ಕುರಿ ಸಂತೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿ ಕಂಡು ಬಂದಿತು.
ಯಾದಗಿರಿ ಜಿಲ್ಲೆಯ ಅತಿ ದೊಡ್ಡ ಕುರಿ ವ್ಯಾಪಾರ ಮಾರುಕಟ್ಟೆಯಾಗಿರುವ ಶಹಾಪುರದಲ್ಲಿ ಹಲವು ಬಗೆಯ ತಳಿಗಳ ಕುರಿಗಳು ಸಂತೆಗೆ ಬಂದಿದ್ದವು. ಜೂನ್. 17ಕ್ಕೆ ಬಕ್ರೀದ್ ಹಬ್ಬವಿದ್ದು, ಈ ಹಿನ್ನೆಲೆ ಕುರಿ ಹಾಗೂ ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.ನೆರೆ ಜಿಲ್ಲೆಗಳಾದ ಕಲಬುರಗಿ, ಆಳಂದ, ಅಫಜಲಪುರ, ಜಮಖಂಡಿ, ಬಿಜಾಪುರ, ಇಂಡಿ, ಚಡಚಣ ಬಾಗಲಕೋಟೆ, ರಾಯಚೂರು, ಸಿಂಧನೂರು, ಚಿತ್ರದುರ್ಗ, ನಾರಾಯಣಪೇಟ್, ಮೈಬೂಬ್ ನಗರ್, ಲಿಂಗಸುಗೂರು ಸೇರಿದಂತೆ ವಿವಿಧ ನಗರಗಳಿಂದ ಕುರಿ ಮತ್ತು ಮೇಕೆಗಳು ಮಾರಾಟಕ್ಕೆ ಬಂದಿದ್ದವು.
ಸಾಮಾನ್ಯವಾಗಿ ₹5 ಸಾವಿರದಿಂದ ₹35 ಸಾವಿರ ವರೆಗೂ ಕುರಿ ಮಾರಾಟ ಮಾಡಲಾಗುತ್ತದೆ. ದೈಹಿಕವಾಗಿ ದಷ್ಟ ಪುಷ್ಟವಾಗಿದ್ದ ಕುರಿಗಳಿಗೆ ₹35 ಸಾವಿರಕ್ಕೂ ಹೆಚ್ಚಿನ ಬೆಲೆ ನಿಗದಿ ಮಾಡಲಾಗಿದೆ. ಕಲಬುರಗಿ, ಸೋಲಾಪುರ್, ಬಾಂಬೆ, ಹೈದರಾಬಾದ್, ಸಿಂಧನೂರ್, ರಾಯಚೂರು, ಬಾಗಲಕೋಟೆ, ಜಮಖಂಡಿ, ಬಳ್ಳಾರಿ, ಸೇರಿದಂತೆ ವಿವಿಧ ನಗರಗಳಿಂದ ಕುರಿ ವ್ಯಾಪಾರಿಗಳು ಬಂದಿದ್ದು, ಕುರಿ ವ್ಯಾಪಾರ ಮಾಡಿದ್ದಾರೆ.ಬಕ್ರೀದ್ ಹಬ್ಬದ ಸಮಯದಲ್ಲಿ ಕುರಿ, ಮೇಕೆಗಳಿಗೆ ಉತ್ತಮ ಬೇಡಿಕೆ ಬರುವ ಕಾರಣ ವರ್ಷವಿಡೀ ಕುರಿ, ಮೇಕೆಗಳನ್ನು ಪೌಷ್ಟಿಕ ಆಹಾರ ನೀಡಿ ಸಾಕಾಣೆ ಮಾಡಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎನ್ನತ್ತಾರೆ ಆಲಮೇಲದ ಬಸಪ್ಪ ಪೂಜಾರಿಯವರು.
ಸಂತೆಯಲ್ಲಿ ₹10 ಕೋಟಿ ವ್ಯವಹಾರ
ಶಹಾಪುರದಲ್ಲಿ ವರ್ಷ ಪೂರ್ತಿ ಪ್ರತಿ ಶುಕ್ರವಾರ ಕುರಿ ಸಂತೆ ಜರುಗುತ್ತದೆ. ಸಾಮಾನ್ಯವಾಗಿ ಪ್ರತಿ ವಾರ ಒಂದರಿಂದ ಎರಡು ಕೋಟಿ ವ್ಯಾಪಾರ ನಡೆಯುತ್ತಿತ್ತು. ಆದರೆ ಮುಂದೆ ಬಕ್ರಿದ್ ಹಬ್ಬವಿರುವ ಕಾರಣ ಈ ಶುಕ್ರವಾರ 10 ಕೋಟಿ ರು. ವ್ಯವಹಾರ ನಡೆದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಕುರಿ ಸಂತೆ ಶಹಾಪುರದಲ್ಲಿ ನಡೆದಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಯೊಬ್ಬರು.