ಅಂತರ್‌ಧರ್ಮೀಯ ವಿವಾಹವಾಗಿ ಊರು ಬಿಟ್ಟು ಬಂದಿದ್ದ ದಂಪತಿಗೆ ಆಶ್ರಯ

| Published : Jul 23 2025, 12:30 AM IST

ಅಂತರ್‌ಧರ್ಮೀಯ ವಿವಾಹವಾಗಿ ಊರು ಬಿಟ್ಟು ಬಂದಿದ್ದ ದಂಪತಿಗೆ ಆಶ್ರಯ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ದಿನಗಳ ಹಿಂದೆ ಖಾಲಿ ಮಂಟಪದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಪತಿಯೇ ಹೆರಿಗೆ ಪ್ರಕ್ರಿಯೆ ನಡೆಸಿದ್ದನು. ನಂತರ ಸ್ಥಳೀಯರ ನೆರವಿನೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಪಾರ್ಶ್ವವಾಯು ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಂತರ್‌ಧರ್ಮೀಯ ವಿವಾಹವಾಗಿ ಮನೆಯಿಂದ ಹೊರಬಂದು ಇತ್ತೀಚೆಗೆ ಪಟ್ಟಣದ ಖಾಲಿ ಮಂಟಪದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಆಸ್ಪತ್ರೆ ಸೇರಿದ್ದ ಮಹಿಳೆ ಹಾಗೂ ಪತಿಗೆ ಹಿಂದೂ ಜಾಗರಣೆ ವೇದಿಕೆ ಸಂಚಾಲಕ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಳ್ಳಾರಿಯ ಇಂದಿರಾ ನಗರದ ಮಹೇಂದ್ರ ಹಾಗೂ ಗೌರಿಬಿದನೂರು ತಾಲೂಕು ತೊಂಡೆಬಾವಿ ಪತ್ನಿ ಹುಸೇನಿ ಪ್ರೇಮ ವಿವಾಹವಾಗಿ ಮನೆಯವರ ವಿರೋಧದಿಂದ ಹೊರಬಂದಿದ್ದರು. ನಂತರ ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ವಾಸವಾಗಿದ್ದರು.

ಕೆಲ ದಿನಗಳ ಹಿಂದೆ ಖಾಲಿ ಮಂಟಪದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಪತಿಯೇ ಹೆರಿಗೆ ಪ್ರಕ್ರಿಯೆ ನಡೆಸಿದ್ದನು. ನಂತರ ಸ್ಥಳೀಯರ ನೆರವಿನೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಪಾರ್ಶ್ವವಾಯು ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದರು.

ಮುಸ್ಲಿಂ ಧರ್ಮದ ಹುಸೇನಿ ಮತ್ತು ಹಿಂದೂ ಧರ್ಮಕ್ಕೆ ಸೇರಿದ ಮಹೇಂದ್ರ ಈ ಇಬ್ಬರು ಕಳೆದ ವರ್ಷ ದಸರಾ ಹಬ್ಬದ ವೇಳೆ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ನಂತರ ಹೆರಿಗೆ ಹಿಂದಿನ ಎರಡು ದಿನಗಳ ಹಿಂದೆ ಶ್ರೀರಂಗಪಟ್ಟಣಕ್ಕೆ ಬಂದು ದೇವಾಲಯದ ಮಂಟಪದಲ್ಲಿ ಉಳಿದುಕೊಂಡಿದ್ದರು. ಆ ವೇಳೆ ಹುಸೇನಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಮಂಟಪದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಮಹೇಂದ್ರ ಹಾಗೂ ಹುಸೇನ ದಂಪತಿಯನ್ನು ಮೈಸೂರು ಚೆಲುವಾಂಬ ಆಸ್ಪತ್ರೆಯಿಂದ ರವಿ ಕಿರಂಗೂರು ಹಾಗೂ ಪಟ್ಟಣದ ಜಾಗರಣ ಕಾರ್ಯಕರ್ತ ಸಂಜು ಅವರು ಡಿಸ್ಚಾರ್ಜ್ ಮಾಡಿಸಿ ನೇರವಾಗಿ ನಮ್ಮ ಮನೆಗೆ ಕರೆತಂದು ಆಶ್ರಯ ನೀಡಿದ್ದಾರೆ.

ಸದ್ಯ ಮಗು ಆರೋಗ್ಯವಾಗಿದ್ದು, ತಾಯಿಗೆ ಪಾರ್ಶ್ವವಾಯು ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಸೋಮವಾರ ಮತ್ತೆ ಆಸ್ಪತ್ರೆಗೆ ಬರ ಹೇಳಿದ್ದಾರೆ. ದಂಪತಿ ಹಾಗೂ ಮಗು ನಮ್ಮ ಮನೆಯಲ್ಲಿ ತಾತ್ಕಾಲಿಕವಾಗಿ ಉಳಿದಿದ್ದಾರೆ. ಅವರಿಗೆ ಅಗತ್ಯವಾದ ನೆರವು ನೀಡುವುದಾಗಿ ಚಂದನ್ ತಿಳಿಸಿದ್ದಾರೆ.