ಈ ಅಭಿಯಾನದಡಿ ಕುರಿಗಾಹಿಗಳಿಗೆ ಉಪಯುಕ್ತ ವಸ್ತುಗಳನ್ನು ಒಳಗೊಂಡ ವಿಶೇಷ ಕಿಟ್ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಕಿಟ್‌ನಲ್ಲಿ ಗಟ್ಟಿಮುಟ್ಟಾದ ಬೆನ್ನುಹೊರೆ, ಸ್ಟೀಲ್ ನೀರಿನ ಬಾಟಲಿ, ರಾತ್ರಿಯಲ್ಲಿ ಬಳಸಲು ಗುಣಮಟ್ಟದ ಬ್ಯಾಟರಿ ಮತ್ತು ಕಪ್ಪತ್ತಗುಡ್ಡದ ಮಹತ್ವ ವಿವರಿಸುವ ಕರಪತ್ರಗಳು ಸೇರಿವೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲ್ಪಡುವ ಕಪ್ಪತ್ತಗುಡ್ಡವನ್ನು ಬೇಸಿಗೆಯ ಕಾಡ್ಗಿಚ್ಚಿನಿಂದ ರಕ್ಷಿಸಲು ಅರಣ್ಯ ಇಲಾಖೆ ವಿನೂತನ ಕ್ರಮ ಕೈಗೊಂಡಿದ್ದು, ಕುರಿಗಾಹಿಗಳನ್ನು ಬೆಟ್ಟದ ರಕ್ಷಕರನ್ನಾಗಿ ಪರಿವರ್ತಿಸಲು ವಿಶೇಷ ಜಾಗೃತಿ ಅಭಿಯಾನ ಪ್ರಾರಂಭಿಸಲಾಗಿದೆ.ಕಪ್ಪತ್ತಗುಡ್ಡದ ಹುಲ್ಲು ಅಥವಾ ಭೂಮಿ ಸುಟ್ಟರೆ, ಆ ವರ್ಷ ಮಳೆ ಮತ್ತು ಬೆಳೆ ಸಮೃದ್ಧವಾಗಿರುತ್ತವೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ. ಈ ಕಾರಣಕ್ಕಾಗಿ ಕೆಲವರು ಉದ್ದೇಶಪೂರ್ವಕವಾಗಿ ಬೆಟ್ಟಕ್ಕೆ ಬೆಂಕಿ ಹಚ್ಚುತ್ತಾರೆ. ಬೆಂಕಿಯಿಂದ ಕಪ್ಪತ್ತಗುಡ್ಡಕ್ಕೆ ಆಗುವ ಹಾನಿ ತಡೆಯಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ.
ಈ ಅಭಿಯಾನದಡಿ ಕುರಿಗಾಹಿಗಳಿಗೆ ಉಪಯುಕ್ತ ವಸ್ತುಗಳನ್ನು ಒಳಗೊಂಡ ವಿಶೇಷ ಕಿಟ್ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಕಿಟ್‌ನಲ್ಲಿ ಗಟ್ಟಿಮುಟ್ಟಾದ ಬೆನ್ನುಹೊರೆ, ಸ್ಟೀಲ್ ನೀರಿನ ಬಾಟಲಿ, ರಾತ್ರಿಯಲ್ಲಿ ಬಳಸಲು ಗುಣಮಟ್ಟದ ಬ್ಯಾಟರಿ ಮತ್ತು ಕಪ್ಪತ್ತಗುಡ್ಡದ ಮಹತ್ವ ವಿವರಿಸುವ ಕರಪತ್ರಗಳು ಸೇರಿವೆ ಎನ್ನುತ್ತಾರೆ ಮುಂಡರಗಿ ವಿಭಾಗದ ಆರ್‌ಎಫ್‌ಒ ಮಂಜುನಾಥ ರಾಮಣ್ಣ ಮೇಗಲಮನಿ.ಕಳೆದ ವರ್ಷವೂ ಅರಣ್ಯ ಇಲಾಖೆಯಿಂದ ಕುರಿಗಾಹಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿತ್ತು. ಕುರಿಗಾಹಿಗಳ ಗುಡಿಸಲಿಗೆ ಭೇಟಿ ನೀಡಿ ಕಾಡ್ಗಿಚ್ಚು ಕುರಿತು ಜಾಗೃತಿ ಮೂಡಿಸಲಾಗಿತ್ತು. ಆದರೆ ಈ ಬಾರಿ ಪ್ರತಿಯೊಬ್ಬ ಕುರಿಗಾಯಿಯನ್ನು ವೈಯಕ್ತಿಕವಾಗಿ ತಲುಪುತ್ತಿದ್ದೇವೆ ಮತ್ತು ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ 31 ಹಳ್ಳಿಗಳ ಕುರಿಗಾಹಿಗಳ ಹಟ್ಟಿಗೆ ತೆರಳಿ 700 ಕಿಟ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಇಲಾಖೆಯು ಕುರುಬರನ್ನು ಮಾತ್ರವಲ್ಲದೆ ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಹಳ್ಳಿಗಳ ಯುವಕರನ್ನು ಆಕರ್ಷಿಸಲು ಮುಕ್ತ ವಾಲಿಬಾಲ್ ಪಂದ್ಯಾವಳಿ ಸಹ ಆಯೋಜಿಸಿತ್ತು. 28 ಹಳ್ಳಿಗಳಿಂದ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕಪ್ಪತ್ತಗುಡ್ಡದ ಮಡಿಲಿನಲ್ಲಿರುವ ಹಳ್ಳಿಗಳ ಸಮಾಜ ಸೇವೆ, ಕಲಾ ರಂಗ, ಜಾನಪದ ಕಲಾವಿದರು, ಕನ್ನಡ ಉಳಿಸಿ ಬೆಳೆಸುತ್ತಿರುವ ಕವಿಗಳನ್ನು, ಜಾನಪದ ಡೊಳ್ಳು ಹಾಡುವವರನ್ನು, ರೈತ ಸಾಧಕರನ್ನು ಹೀಗೆ ವಿವಿಧ ರಂಗದಲ್ಲಿ ಸಾಧನೆ ಮಾಡಿದ 200ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ.ಕಪ್ಪತ್ತಗುಡ್ಡದ ರಕ್ಷಣೆಗಾಗಿ ಇಡೀ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನವನ್ನು ಆರ್‌ಎಫ್‌ಒ ಮಂಜುನಾಥ ರಾಮಣ್ಣ ಮೇಗಲಮನಿ ನೇತೃತ್ವದ ತಂಡ ಮಾಡುತ್ತಿದೆ. ಮುಂಡರಗಿ ಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಮೈಲಾರಪ್ಪ ಮಡಿವಾಳರ, ಶರಣಪ್ಪ ನೀರಲಗಿ, ಸೋಮನಗೌಡ ಪಾಟೀಲ, ರಾಮಪ್ಪ ಕಿಚಡಿ, ಸಂತೋಷ ಕಗದಾಳ, ಮೌಲಾಸಾಬ ಬನ್ನಿಕೊಪ್ಪ, ರಾಘವೇಂದ್ರ ಹೊಸಮನಿ, ರಾಹುಲ ಬಮ್ಮನಪಾಡ, ಈಶ್ವರ ಮರತೂರ, ಬಸವರಾಜ ಬಾಲವ್ವಗೊಳ, ಐಯ್ಯನಗೌಡರ, ಗಂಗಾಮ್ಮ ಪೂಜಾರ, ಮಂಜುನಾಥ ದೊಡ್ಡವಾಡ, ಕೃಷ್ಣ ಫಮ್ಮಾರ, ಬಸುರಾಜ ಕುರಬರ, ನೂರಹಮ್ಮದ ಲೈನ್ ಅವರು ಕಪ್ಪತ್ತಗುಡ್ಡ ಪರಿಸರ ಸಂರಕ್ಷಣೆಗೆ ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಪ್ಪತ್ತಗುಡ್ಡ ರಕ್ಷಾಕವಚದಂತಿರುವ ಸಿಬ್ಬಂದಿ ಕುರಿತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಕುರಿಗಾಹಿಗಳಿಗೆ ಮಾಹಿತಿ: ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಮುಂಡರಗಿ ಭಾಗದ ಸಾಧಕರನ್ನು ಸನ್ಮಾನಿಸಲಾಯಿತು. ಯುವಕರು ಪರಿಸರಪ್ರಿಯರಾಗಬೇಕು ಎನ್ನುವ ಹಿನ್ನೆಲೆಯಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಿದ್ದೇವೆ. ಕಪ್ಪತ್ತಗುಡ್ಡ ಬೆಂಕಿ ತಡೆಗಾಗಿ ಕುರಿಗಾಹಿಗಳಿಗೆ ಮಾಹಿತಿ ನೀಡಿ, 700 ವಿಶೇಷ ಕಿಟ್ ವಿತರಿಸಿದ್ದೇವೆ ಎಂದು ಕಪ್ಪತ್ತಗುಡ್ಡ ಅರಣ್ಯ ವಲಯ ಅಧಿಕಾರಿ ಮಂಜುನಾಥ ರಾಮಣ್ಣ ಮೇಗಲಮನಿ ತಿಳಿಸಿದರು.