ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಠ್ಯ ಓದಿ ಹೆಚ್ಚು ಅಂಕಗಳನ್ನು ತೆಗೆಯುವುದೇ ವಿದ್ಯಾಭ್ಯಾಸದ ಗುರಿ. ಮಕ್ಕಳಿಗೆ ಕಲಿಸುವುದೇ ಉತ್ತಮ ವಿದ್ಯಾಶಾಲೆ ಎಂಬ ಭಾವನೆ ಬೇರೂರುತ್ತಿರುವ ಈ ಪರ್ವ ಕಾಲದಲ್ಲಿ ಪಠ್ಯಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಪ್ರಗತಿಗೆ ಪೂರಕವಾಗುತ್ತವೆ ಹಾಗೂ ಇಂದಿನ ದಿನಗಳಲ್ಲಿ ಅಂತಹ ಅಗತ್ಯ ಹೆಚ್ಚಾಗಿದೆ ಎಂಬುದಕ್ಕೆ ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಿರುವ ‘ಶೆಟ್ಟರ ಸಂತೆ’ ಕಾರ್ಯಕ್ರಮ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಮಕ್ಕಳ ‘ವೇಷ ಭೂಷಣ’ ಸ್ಪರ್ಧೆ ಸಾಕ್ಷಿಯಾಯಿತು.

ಇಲ್ಲಿನ ಆರ್ಯ ವೈಶ್ಯ ಸ್ನೇಹಿತರ ಬಳಗವು ಆಯೋಜಿಸಿರುವ ನಾಲ್ಕು ದಿನಗಳ ಶೆಟ್ಟರ ಸಂತೆ ಸಾಂಸ್ಕೃತಿಕ ಉತ್ಸವದಲ್ಲಿ ಮಕ್ಕಳ ವೇಷಭೂಷಣ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ 25ಕ್ಕೂ ಹೆಚ್ಚು ಮಕ್ಕಳು ವಿವಿಧ ಬಗೆಯ ವೇಷಭೂಷಣ ತೊಟ್ಟು ಗಮನ ಸೆಳೆದರು.

ಸ್ಪರ್ಧೆಯಲ್ಲಿ ಶ್ರೀಕೃಷ್ಣ, ಕಿತ್ತೂರು ರಾಣಿ ಚನ್ನಮ್ಮ, ದುರ್ಗಾದೇವಿ ಅವತಾರ, ಭಾರತದ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು, ಲಕ್ಷ್ಮೀ, ಬೆಣ್ಣೆ ಕೃಷ್ಣ ಮುಂತಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದ ಮಕ್ಕಳು ವೇದಿಕೆಯ ಮೇಲೆ ತಮ್ಮ ಪಾತ್ರಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.

ವೇಷಭೂಷಣ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವಲ್ಲಿ ಪೋಷಕರ ಪಾತ್ರ ಎದ್ದು ಕಾಣುತ್ತಿತ್ತು. ಸಾಮಗ್ರಿ, ವಸ್ತ್ರ ಪ್ರಸಾದನಗಳನ್ನು ಬಳಸಿ ತಮ್ಮ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಪಡಿಸುವಲ್ಲಿ ಪೋಷಕರ ಶ್ರದ್ಧೆ ಮತ್ತು ಆಸಕ್ತಿ ಗಮನಾರ್ಹವಾಗಿತ್ತು. ಇಂಥ ಆಸಕ್ತಿ ಶ್ರದ್ಧೆಗಳಿಂದ ಮಕ್ಕಳ ವೇಷಭೂಷಣದೊಂದಿಗೆ ಮಕ್ಕಳಿಗೆ ನೀಡಲಾದ ತರಬೇತಿಯೂ ಪ್ರಮುಖ ಪಾತ್ರ ವಹಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳ ವೇಷಭೂಷಣ ಸ್ಪರ್ಧೆಯು ಸಾಂಸ್ಕೃತಿಕವಾಗಿ ಒಂದು ಮೈಲಿಗಲ್ಲಾಯಿತು. 6 ತಿಂಗಳ ಮಕ್ಕಳಿಂದ 7 ವರ್ಷದ ಮಕ್ಕಳಿಗಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 7 ತಿಂಗಳ ಮಗುವನ್ನು ಪಾಲಕರು ಭಾಗವಹಿಸುವಂತೆ ಮಾಡಿದ್ದು, ಎಲ್ಲರನ್ನು ಆಕರ್ಷಿಸಿತು.


ಅತಿ ಚಿಕ್ಕ ವಯಸ್ಸಿನಲ್ಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಪಡೆದಿರುವ ನವಾಮಿ ಮಾಡರ್ನ್‌ ಡ್ರೆಸ್‌ನಲ್ಲಿ ಜನರನ್ನು ರಂಜಿಸಿ ಆಕರ್ಷಿಸಿದ್ದು, ಗಮನಾರ್ಹ ಎನಿಸಿತು. ಮಕ್ಕಳ ಪ್ರತಿಭೆ ಪೋಷಿಸುವ ಇಂಥ ಕಾರ್ಯಕ್ರಮಗಳು ಆಗಾಗ ನಡೆಯಬೇಕು ಎಂಬುದು ಎಲ್ಲರ ಆಶಯವಾಗಿತ್ತು.

ಶ್ರೀನಿವಾಸ ಕಲ್ಯಾಣೋತ್ಸವ: ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಆರ್ಯವೈಶ್ಯ ಗೆಳೆಯರ ಬಳಗದಿಂದ ಆಯೋಜಿಸಿರುವ ಶೆಟ್ಟರ ಸಂತೆ ಭಾಗವಾಗಿ ಶುಕ್ರವಾರ ಸಂಜೆ ವಿಪ ಸದಸ್ಯ ಡಿ.ಎಸ್‌.ಅರುಣ್ ಹಾಗೂ ಪ್ರತಿಭಾ ದಂಪತಿ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ತಿಂಡಿ ಪ್ರಿಯರ ತನು-ಮನ ತಣಿಸಿದ ಶೆಟ್ಟರ ಸಂತೆ

ಆರ್ಯವೈಶ್ಯ ಸ್ನೇಹಿತರ ಬಳಗದ ವತಿಯಿಂದ ಫ್ರೀಡಂ ಪಾರ್ಕ್‌ ಆವರಣದಲ್ಲಿ ಆಯೋಜಿಸಿರುವ ಶೆಟ್ಟರ ಸಂತೆಗೆ ಭರ್ಜರಿ ರೆಸ್ಪಾನ್ಸ್‌ ಲಭಿಸಿದೆ.

ಶೆಟ್ಟರ ಸಂತೆಯಲ್ಲಿ ಅನೇಕ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಮುಖವಾಗಿ ಗೃಹೋಪಯೋಗಿ ವಸ್ತುಗಳು, ತಿಂಡಿ ತಿನಿಸುಗಳ ಸ್ಟಾಲ್‌, ಸೀರೆ ಮಳಿಗೆ, ಡ್ರೆಸ್‌ ಮೆಟೀರಿಯಲ್ಸ್‌ಗಳು ಸೇರಿದಂತೆ ಹಲವು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ವಿಶಿಷ್ಟವಾದ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ ಸೇರಿವೆ. ಈ ಪ್ರದರ್ಶನವು 125ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ತಿಂಡಿಗಳು, ಸಿಹಿತಿಂಡಿಗಳು ಮತ್ತು ಮಸಾಲೆಗಳು ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಒಳಗೊಂಡಿದೆ.

ಶೆಟ್ಟರ ಸಂತೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳಿದ್ದವು. ದೃಷ್ಟಿಹಾಯಿಸಿದ ಕಡೆಯಲ್ಲೆಲ್ಲಾ ಘಮಘಮಿಸುವ ಬಣ್ಣಬಣ್ಣದ ತರಾವರಿ ಭಕ್ಷ್ಯಗಳು, ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು.

ಸಮಾಜದ ವಿಶಿಷ್ಟ, ವಿಭಿನ್ನ ರುಚಿ ಪರಿಶುದ್ಧವಾದ ಮನೆಯ ತಿಂಡಿಗಳ ರುಚಿಯನ್ನು ಇತರೆ ಸಮಾಜಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಿದ್ದ ರುಚಿ ಸಂತೆಗೆ ತಿಂಡಿ ಪ್ರಿಯರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಶೆಟ್ಟರ ಸಂತೆಗೆ ನೂರಾರು ಜನರು ಭೇಟಿ ನೀಡಿದರು. ಖಾದ್ಯಗಳ ಸವಿಯನ್ನು ಸವಿದು, ವಾಸವಿ ಸಮಾಜದ ವಿಶಿಷ್ಟ ತಿಂಡಿಗಳ ಪರಿಚಯ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

ವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಒಂದೇ ಸೂರಿನಡಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತದೆ ಅಂದರೆ ಬಿಡೋದಕ್ಕಾಗುತ್ತಾ. ಒಂದೇ ಸೂರಿನಡಿ ಅದರಲ್ಲೂ ಶೆಟ್ಟರ ಮನೆಯ ಬೊಂಬಾಟ್ ತಿಂಡಿ ಸಿಗುತ್ತದೆ ಅಂದರೆ ಇದಕ್ಕಿಂತ ತಿಂಡಿ ಪ್ರಿಯರಿಗೆ ಬೇರೇನು ಬೇಕು.

ಆಹಾರ ಪ್ರಿಯರ ಗಮನ ಸೆಳೆದ ವಿಶಿಷ್ಟ ಖಾದ್ಯಗಳು: ಸಾಂಪ್ರದಾಯಿಕವಾಗಿ ಮನೆಯಲ್ಲಿ ತಯಾರಾದ ಅಂಟಿನ ಉಂಡೆ, ಪೇಡಾ ವಿವಿಧ ಬಗೆಯ ಹಲ್ವಗಳು, ಬದನೆಕಾಯಿ ಬಜ್ಜಿ, ಬೇಬಿ ಕಾರ್ನ್‌ ಚಟ್ಪಟ್ ಚಿಲ್ಲಿ, ಬೇಬಿ ಆಲೂ, ಮಸಾಲಾ ಪುರಿ, ಚುರ್‌ಮುರಿ, ನಿಪ್ಪಟ್ಟು ಬರ್ಗರ್, ಕೇಕ್ ಐಸ್‌ಕ್ರೀಂ ಸೇರಿದಂತೆ ಆರ್ಯವೈಶ್ಯರ ಸಮಾಜದ ವಿಶಿಷ್ಟ ಖಾದ್ಯಗಳು ಮತ್ತಿತರ ತಿನಿಸುಗಳು ತಿಂಡಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದವು.

ಬಾಯಲ್ಲಿ ನೀರೂರಿಸಿದ ಕುರಕಲು ತಿಂಡಿಗಳು: ಆರ್ಯವೈಶ್ಯರ ಸಂಸ್ಕೃತಿ, ಆಹಾರ ವಿಶಿಷ್ಟತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ರುಚಿ ಸಂತೆ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಶೆಟ್ಟರ ಮನೆಯ ಸಸ್ಯಾಹಾರಿ ಆಹಾರ ಸಂಸ್ಕೃತಿಯ ನಾನಾ ಮುಖಗಳ ಅನಾವರಣವಾಗಿತ್ತು. ಬಗೆಬಗೆಯ ನಿಪ್ಟಟ್ಟು, ಚಕ್ಕುಲಿ, ಕೋಡುಬಳೆ, ಪಡ್ಡು ಸೇರಿದಂತೆ ಬಾಯಲ್ಲಿ ನೀರೂರಿಸುವ ಆರ್ಯವೈಶ್ಯರ ಸ್ವಾದಿಷ್ಟಕರ ತಿನಿಸಿಗಳು ಇಲ್ಲಿತ್ತು.

ಜನರಂತು ಬಹಳ ಉತ್ಸಾಹದಿಂದ ಆಹಾರ ಮೇಳದ ಕಡೆಗೆ ನುಗ್ಗುತ್ತಿದ್ದರು. ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ವಿವಿಧ ವಯೋಮಾನದವರು ರುಚಿ ಸಂತೆಗೆ ಬಂದಿದ್ದರು. ಅಲ್ಲದೇ ಬಂದ ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ಸ್ಥಳದಲ್ಲಿಯೇ ಆರ್ಯವೈಶ್ಯ ಬಾಣಸಿಗರು ತಯಾರಿಸಿಕೊಡುತ್ತಿದ್ದರು.

‘ಶೆಟ್ಟರ ಸಂತೆ’ ಉದ್ಘಾಟಿಸಿದ ಬಿ.ವೈ. ವಿಜಯೇಂದ್ರ

ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಆರ್ಯವೈಶ್ಯ ಸ್ನೇಹಿತರ ಬಳಗದ ನೇತೃತ್ವದಲ್ಲಿ ಆರಂಭವಾದ ‘ಶೆಟ್ಟರ ಸಂತೆ’ ಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಆಧುನಿಕ ತಂತ್ರಜ್ಞಾನದ ಭರಾಟೆಯ ನಡುವೆ ಕೌಟುಂಬಿಕ ಸಂಬಂಧಗಳು ನಶಿಸುತ್ತಿವೆ. ಅವುಗಳನ್ನು ಪುನಃ ಕಟ್ಟುವ ಕಾರ್ಯ ಆಗಬೇಕಿದೆ’ ಹಿರಿಯರ ನಡುವೆ ಸಂಬಂಧ, ಅಣ್ಣ-ತಮ್ಮಂದಿರ ನಡುವೆ ಸಾಮರಸ್ಯ ಬೆಸೆಯುವ ಕಾರ್ಯ ಆಗಬೇಕಿದೆ’ ಎಂದರು.

‘ಆರ್ಯ ವೈಶ್ಯ ಸಮಾಜ ಕೇವಲ ಶಿವಮೊಗ್ಗ ಮಾತ್ರವಲ್ಲ, ರಾಜ್ಯದ ಆರ್ಥಿಕತೆಗೆ ತನ್ನದೇ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ 2047ಕ್ಕೆ ವಿಕಸಿತ ಭಾರತದ ಕನಸು ನನಸಾಗಲು ಈ ಸಮುದಾಯದ ಕೊಡುಗೆ ಅಪಾರವಾದದ್ದು’ ಎಂದರು.

ಸಮಾರಂಭದಲ್ಲಿ ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸ್ವದೇಶಿ ಜಾಗರಣ ಮಂಚ್‌ನ ಜಗದೀಶ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್, ಆರ್ಯವೈಶ್ಯ ಸಮಾಜದ ಹಿರಿಯರಾದ ಭೂಪಾಳಂ ಶಶಿಧರ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಡಾ.ಎಸ್.ವಿ.ಭರತ್, ಡಿ.ಎಲ್.ಮಂಜುನಾಥ್ ಪಾಲ್ಗೊಂಡಿದ್ದರು.

ಮೊದಲ ದಿನ 13 ಜನ ಗಾಯಕರು ಹಳೆಯ ಕನ್ನಡ, ಹಿಂದಿ ಗೀತೆಗಳ ಹಾಡುವ ಪಂಚಮವೇದ ಪ್ರೇಮದ ನಾದ ಕಾರ್ಯಕ್ರಮ ನಡೆಸಿಕೊಟ್ಟರು. ಏ.4ರಂದು ಸಂಜೆ 6ಗಂಟೆಯಿಂದ ಶಿವಮೊಗ್ಗದ ಗಾಂಧಿಬಜಾರ್‌ನ ವಾಸವಿ ಮಹಿಳಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮ ಜರುಗಿದವು. ಏ.5ರಂದು ಭಾನುವಾರ ಸಂಜೆ 6.30ರಿಂದ ವಾಸುದೀಕ್ಷಿತ್ ತಂಡದವರಿಂದ ‘ಭಜನಾ ಜಾಮ್ಮಿಂಗ್’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

---

ಆರ್ಯ ವೈಶ್ಯ ಸಮುದಾಯದ ವ್ಯವಹಾರ, ಉದ್ಯಮಶೀಲತೆ ಇಂದು ಕಡಿಮೆ ಆಗುತ್ತಿದೆ ಎಂಬ ಭಾವನೆಯನ್ನು ತೊಡೆದು ಹಾಕಲು ಸಮುದಾಯದ ಬ್ರಾಂಡ್ ಸೃಷ್ಟಿಸಲು ಶೆಟ್ಟರ ಸಂತೆ ಆರಂಭಿಸಲಾಗಿದೆ. ಮೂಲ ಕಸುಬಿನಲ್ಲಿ ಹೆಚ್ಚು ಲಾಭ ಇದೆ ಎಂಬುದನ್ನು ಮನದಟ್ಡು ಮಾಡುವ ಕೆಲಸ ಈ ವೇದಿಕೆಯಿಂದ ಆಗಲಿದೆ. ಶೆಟ್ಟರ ಸಂತೆಯನ್ನು ಮುಂದೆ ಎರಡು ವರ್ಷಕ್ಕೊಮ್ಮೆ ಆಯೋಜಿಸಿ ಸಮುದಾಯದ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸಲಾಗುವುದು. ಕಾರ್ಯಕ್ರಮದ ಭಾಗವಾಗಿ ಎರಡು ದಿನ ವಾಸವಿ ಮಹಿಳಾ ಸಂಘದ 50ನೇ ವಾರ್ಷಿಕೋತ್ಸವ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.

ಡಿ.ಎಸ್.ಅರುಣ್‌ ವಿಧಾನಪರಿಷತ್‌ ಸದಸ್ಯ