ಶಿಡ್ಲಘಟ್ಟ ನಗರಸಭೆ ₹2.44 ಕೋಟಿ ಉಳಿತಾಯ ಬಜೆಟ್

| Published : Mar 30 2025, 03:03 AM IST

ಸಾರಾಂಶ

ಶಿಡ್ಲಘಟ್ಟ ನಗರಸಭೆಗೆ ಆಸ್ತಿ ತೆರಿಗೆಯಿಂದ ಅತಿ ಹೆಚ್ಚು 3 ಕೋಟಿ 27 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಿದ್ದು ಇನ್ನುಳಿದಂತೆ ನೀರಿನ ತೆರಿಗೆಯಿಂದ 52 ಲಕ್ಷ, ನಗರಸಭೆಯ ವಾಣಿಜ್ಯ ಮಳಿಗೆ, ಐಡಿಎಸ್ಎಂಟಿ ಮಳಿಗೆಗಳ ಬಾಡಿಗೆಗಳಿಂದ 29 ಲಕ್ಷ ಹಾಗೂ ಇತರೆ ಅಭಿವೃದ್ದಿ ಶುಲ್ಕದ ಮೂಲಕ 25 ಲಕ್ಷ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಅಂದಾಜು ಆಯ-ವ್ಯಯದ ಬಜೆಟ್ ಮಂಡನೆ ಸಭೆಯಲ್ಲಿ 174 ಕೋಟಿ ಆದಾಯದ ನಿರೀಕ್ಷೆ, 171 ಕೋಟಿ ಅಂದಾಜು ಖರ್ಚಿನೊಂದಿಗೆ 2.44 ಕೋಟಿ ಉಳಿತಾಯ ಬಜೆಟ್ನ್ನು ಮಂಡಿಸಿದೆ.

ಆಸ್ತಿ ತೆರಿಗೆಯಿಂದ ಅತಿ ಹೆಚ್ಚು 3 ಕೋಟಿ 27 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಿದ್ದು ಇನ್ನುಳಿದಂತೆ ನೀರಿನ ತೆರಿಗೆಯಿಂದ 52 ಲಕ್ಷ, ನಗರಸಭೆಯ ವಾಣಿಜ್ಯ ಮಳಿಗೆ, ಐಡಿಎಸ್ಎಂಟಿ ಮಳಿಗೆಗಳ ಬಾಡಿಗೆಗಳಿಂದ 29 ಲಕ್ಷ ಹಾಗೂ ಇತರೆ ಅಭಿವೃದ್ದಿ ಶುಲ್ಕದ ಮೂಲಕ 25 ಲಕ್ಷ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.ನಗರಸಭೆಗೆ ಆದಾಯದ ಮೂಲ

ಉದ್ದಿಮೆ ಪರವಾನಿಗೆಗೆ ವಿಧಿಸುವ ಶುಲ್ಕದ ಮೂಲಕ 15 ಲಕ್ಷ ರೂ, ಖಾತೆ ಪ್ರತಿ ಖಾತೆ ಬದಲಾವಣೆ ಶುಲ್ಕದ ಬಾಬ್ತು 50 ಲಕ್ಷ ರೂ, ಅನುಪಯುಕ್ತ ಮತ್ತು ದಾಸ್ತಾನು ಮಾರಾಟ ಬಾಬ್ತು 5 ಲಕ್ಷ ರೂ, ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ಬಾಬ್ತು ಶುಲ್ಕದ ರೂಪದಲ್ಲಿ 8 ಲಕ್ಷ ರೂ ಆದಾಯ ಬರುವ ನಿರೀಕ್ಷೆ ಮಾಡಲಾಗಿದೆ. ಅಮೃತ್ 2.0 ಅನುದಾನದಡಿ 30 ಕೋಟಿ, ಎಸ್ಎಫ್ಸಿ ವಿಶೇಷ ಅನುದಾನದಡಿ 5 ಕೋಟಿ ರೂ, 15 ನೇ ಹಣಕಾಸು ಯೋಜನೆಯಡಿ 2 ಕೋಟಿ 5 ಲಕ್ಷ, ಸರ್ಕಾರದಿಂದ ಅನುದಾನದ ರೂಪದಲ್ಲಿ ಆದಾಯ ಬರುವ ನಿರೀಕ್ಷೆ ಮಾಡಲಾಗಿದೆ.ನೀರು, ಆರೋಗ್ಯ, ಸ್ವಚ್ಛತೆಗೆ ಒತ್ತು

ಇನ್ನು ಪ್ರಸಕ್ತ ವರ್ಷದಲ್ಲಿ ನಗರದ ಎಲ್ಲಾ ವಾರ್ಡುಗಳಿಗೆ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಚ ನಗರ, ಬೀದಿ ದೀಪ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ದಿಗೆ ಆಯ ವ್ಯಯದಲ್ಲಿ ಅಧ್ಯತೆ ನೀಡಲಾಗಿದೆ. ನೈರ್ಮಲ್ಯ ಹಾಗು ಘನತ್ಯಾಜ್ಯ ನಿರ್ವಹಣೆಗಾಗಿ ಯಂತ್ರೋಪಕರಣ ವಾಹನಗಳನ್ನು ಖರೀದಿಸಲು 1.5 ಕೋಟಿ ನಿಗದಿಪಡಿಸಿದ್ದು ನಗರದ ಒಳಚರಂಡಿ ವ್ಯವಸ್ಥೆಯ ಅಭಿವೃದ್ದಿಗಾಗಿ 60 ಕೋಟಿ ನಿಗಧಿಪಡಿಸಲಾಗಿದೆ. ವರ್ಗವಾರು ಗಮನಿಸುವುದಾದರೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ದಿ ನಿಧಿ (ಶೇ 24.10 %) 65 ಲಕ್ಷ, (ಶೇ 7.25) 18 ಲಕ್ಷ ರೂ, ಇತರೆ ಕಲ್ಯಾಣ ನಿಧಿ (ಶೇ 5%) 8 ಲಕ್ಷ ರೂಗಳನ್ನು ಮೀಸಲು ಇಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ರೂಪನವೀನ್, ಪ್ರಭಾರ ಪೌರಾಯುಕ್ತ ಮೋಹನ್ ಕುಮಾರ್ ,ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಮುನಿರಾಜು ಎಂ, ಸುಮಿತ್ರಾ ರಮೇಶ್, ರಾಘವೇಂದ್ರ, ಶಿವಮ್ಮ, ಕೃಷ್ಣಮೂರ್ತಿ, ಲಕ್ಷ್ಮಯ್ಯ, ನಾರಾಯಣಸ್ವಾಮಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.