ಸಾರಾಂಶ
ಇಲ್ಲಿಯ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವಕ್ಕಾಗಿ ಮನರಂಜನಾ ಆಟಗಳ ಜಾಗವನ್ನು ಈ ಬಾರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ, ತುರುವೇಕೆರೆ
ಇಲ್ಲಿಯ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವಕ್ಕಾಗಿ ಮನರಂಜನಾ ಆಟಗಳ ಜಾಗವನ್ನು ಈ ಬಾರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಇದುವರೆಗೂ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಮನರಂಜನಾ ಆಟಗಳು, ಅಂಗಡಿಗಳು ಮತ್ತು ತಿಸಿಸುಗಳ ಅಂಗಡಿಗಳನ್ನು ತೆರಯಲಾಗಿತ್ತು. ಆದರೆ ಈ ಆಟದ ಮೈದಾನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ನ್ಯಾಯಾಲಯವು ಈ ಶಾಲೆಯ ಶೈಕ್ಷಣಿಕ ಕಾರ್ಯಕ್ರಮಗಳ ವಿನಃ ಬೇರೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಪ್ರತಿಬಂಧಿಸಿ ಆದೇಶ ನೀಡಿದೆ. ಆದ ಕಾರಣ ಈ ಆಟದ ಮೈದಾನದಲ್ಲಿ ಶೈಕ್ಷಣಿಕ ಸದುದ್ದೇಶದ ಕಾರ್ಯಕ್ರಮದ ವಿನಃ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೇರೊಂದು ಸ್ಥಳವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಸದ್ಯ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಮನೋರಂಜನಾ ಆಟಗಳು, ಇನ್ನಿತರ ಅಂಗಡಿಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಡಿ ೧೯ ರಿಂದ ಡಿ ೨೬ ರವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಜಾಯಿಂಟ್ ವ್ಹೀಲ್, ಕೊಲಂಬಸ್, ಅಮ್ಯೂಸ್ ಮೆಂಟ್ ಪಾರ್ಕ್, ವಸ್ತು ಪ್ರದರ್ಶನಗಳು ಸೇರಿದಂತೆ ಎಲ್ಲಾ ಅಂಗಡಿಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ.