ಶಿವಮೊಗ್ಗ: ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನ

| Published : Nov 17 2024, 01:19 AM IST

ಸಾರಾಂಶ

ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನವನ್ನು ನ.22, 23, 24ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಯೋಜಕಿ ಡಾ. ಜಿ.ಎಸ್. ಸರೋಜ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನವನ್ನು ನ.22, 23, 24ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಯೋಜಕಿ ಡಾ. ಜಿ.ಎಸ್. ಸರೋಜ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ದೇಶದ ಸುಶಿಕ್ಷಿತ ಮಹಿಳೆಯರ ಬೃಹತ್ ಸಂಸ್ಥೆಯಾದ ಅಖಿಲ ಭಾರತ ಕವಯಿತ್ರಿ ಸಮ್ಮೇಳನಕ್ಕೀಗ ರಜತ ಮಹೋತ್ಸವ ಸಂಭ್ರಮ. ವಿಶ್ವಶಾಂತಿ ಮತ್ತು ಸದ್ಭಾವನಾ ಸ್ಥಾಪನೆಗಾಗಿ ಭಾರತೀಯ ಸಾಹಿತ್ಯ ಮತ್ತು ಭಾರತೀಯ ನಾರಿ ಸಂಸ್ಕೃತಿಯ ಸೌರಭ ಪಸರಿಸುತ್ತಿರುವ ಕಾರ್ಯವೈಶಿಷ್ಟ್ಯ ಆದರ್ಶಪ್ರಾಯವಾದುದು ಎಂದು ಅವರು ಅಭಿಪ್ರಾಯಪಟ್ಟರು.2000ರಲ್ಲಿ ಆರಂಭವಾದ ಅಖಿಲ ಭಾರತ ಕವಯಿತ್ರಿ ಸಮ್ಮೇಳನ ಶಿವಮೊಗ್ಗದಲ್ಲಿ ನಡೆಯುತ್ತಿರುವುದು 24ನೇ ಸಮ್ಮೇಳನವಾಗಿದೆ. ಪ್ರತಿ ಸಮ್ಮೇಳನದಲ್ಲಿ ಬಹುಭಾಷಾ ಕವಿಗೋಷ್ಠಿ, ಶೋಧಪತ್ರ ಪ್ರಸ್ತುತಿ, ವಿಚಾರ ಸಂಕಿರಣ, ಮಹಿಳಾ ಯುವಗೋಷ್ಠಿ, ಪುಸ್ತಕಗಳ ಬಿಡುಗಡೆ, ಪಾರಂಪರಿಕ ಹಾಗೂ ಆಧುನಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಂಸ್ಕೃತಿ ಆಚಾರ ವಿಚಾರಗಳ ಕೊಡುಕೊಳ್ಳುವಿಕೆ, ಭಾಷಾ ಸಾಮರಸ್ಯ ರಾಷ್ಟ್ರೀಯ ಏಕತೆ ಮುಂತಾದವುಗಳ ಕುರಿತಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳ ಸುಮಾರು 500ಕ್ಕೂ ಹೆಚ್ಚು ಲೇಖಕಿಯರು ಪಾಲ್ಗೊಳ್ಳಲಿದ್ದಾರೆ. ದೇಶವಲ್ಲದೆ ನೇಪಾಳ, ಬಾಂಗ್ಲಾ, ಕೆನಡಾ, ಲಂಡನ್, ಆಸ್ಟ್ರೇಲಿಯದಿಂದಲೂ ಕೂಡ ಲೇಖಕಿಯರು ಭಾಗವಹಿಸಲಿದ್ದು, ಇದೊಂದು ಶಿವಮೊಗ್ಗೆಯ ಸಾರಸತ್ವ ಲೋಕದ ಇತಿಹಾಸದಲ್ಲಿ ಅಪೂರ್ವ ಸಮಾವೇಶವಾಗಿದೆ. ಇಡೀ ಭಾರತದಲ್ಲಿಯೇ ಇಂತಹದೊಂದು ಸಮ್ಮೇಳನ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಸಮ್ಮೇಳನದಲ್ಲಿ 24 ಭಾಷೆಯ ಪುಸ್ತಕಗಳು ಹಾಗೂ ಕನ್ನಡ ಭಾಷೆಯ ವಿವಿಧ ಪ್ರಕಾರಗಳ 24 ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.ನಾರಿಶಕ್ತಿಗೆ ಹೊಸ ಆಯಾಮ ನೀಡುವ ಈ ಸಮ್ಮೇಳನದ ಮುನ್ನ ದಿನ ಅಂದರೆ ನ.21ರಂದು ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡತಡಿಯಲ್ಲಿ ಜ್ಯೋತಿ ಬೆಳಗಿಸಲಾಗುವುದು. ಈ ಜ್ಯೋತಿಯನ್ನು ಸಂಸದ ಬಿ.ವೈ. ರಾಘವೇಂದ್ರ ಬೆಳಗಿಸುವರು ಎಂದರು.ಈ ಜ್ಯೋತಿಗೆ ನ. 22ರಂದು ಶಿವಮೊಗ್ಗದ ಶಿವಮೂರ್ತಿ ವೃತ್ತದಲ್ಲಿ ಬೆಳಗ್ಗೆ 9.30ಕ್ಕೆ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್ ಚಾಲನೆ ನೀಡುವರು. ನಂತರ ಮೆರವಣಿಗೆಯ ಮೂಲಕ ಕುವೆಂಪು ರಂಗಮಂದಿರಕ್ಕೆ ಜ್ಯೋತಿಯನ್ನು ತರಲಾಗುವುದು. ನಂತರ ಬೆಳಗ್ಗೆ 11ಕ್ಕೆ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಸಮ್ಮೇಳನ ಉದ್ಘಾಟಿಸುವರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್‌.ಎನ್‌. ಚನ್ನಬಸಪ್ಪ, ಶಾರದಾ ಪೂರ್‍ಯನಾಯ್ಕ್, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್‌ ಬಲ್ಕೀಶ್ ಬಾನು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಈ ಸಮ್ಮೇಳನದಲ್ಲಿ ಸುಮಾರು 85 ಕವಯಿತ್ರಿಯರಿಗೆ ನಗದು ಬಹುಮಾನ ನೀಡಲಾಗುವುದು. ಇದರ ಜೊತೆಗೆ ನವರತ್ನ ನಾರಿ ಎಂಬ ಹೆಸರಿನಲ್ಲಿ 9 ಜನರಿಗೆ ಸುಲಭ ಸಾಹಿತ್ಯ ಅಕಾಡೆಮಿಯವರು ಸನ್ಮಾನಿಸುವರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ, ಕವಯಿತ್ರಿ ಸವಿತಾ ನಾಗಭೂಷಣ್, ಸ. ಉಷಾ, ಗಾಯಿತ್ರಿ ಮುಂತಾದವರನ್ನು ಸನ್ಮಾನಿಸಲಾಗುತ್ತದೆ ಎಂದರು.ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಕವಿಗೋಷ್ಠಿಗಳು ನಡೆಯಲಿವೆ. ಸಂಜೆ 6 ರಿಂದ 8ರವರೆಗೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಬಂದ ಬೇರೆಬೇರೆ ಭಾಷಿಗರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸೌಹಾರ್ದತೆಯನ್ನು ಮೆರೆಯಲಿದ್ದಾರೆ. ಭಾಷೆ ಬೇರೆಯಾದರೂ ಭಾವ ಒಂದೇ ಎಂಬ ಭಾವನೆಯನ್ನು ಈ ಮೂಲಕ ಪ್ರಸ್ತುತ ಪಡಿಸಲಾಗುವುದು ಎಂದು ತಿಳಿಸಿದರು.ಶಿವಮೊಗ್ಗದ ವೈವಿಧ್ಯತೆಯನ್ನು ಸಾರುವ ದೃಷ್ಟಿಯಲ್ಲಿ ಶಿವಮೊಗ್ಗವನ್ನೇ ಪ್ರಧಾನವಾಗಿಟ್ಟುಕೊಂಡು ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೊಂದು ಅಂತರರಾಷ್ಟ್ರೀಯ ಮಹಾಸಮ್ಮೇಳನವೂ ಆಗಿರುವುದರಿಂದ ಸುಮಾರು ₹14 ಲಕ್ಷ ಖರ್ಚು ಬರುವುದರಿಂದ ಸಾಹಿತ್ಯ ಸಹೃದಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಮ್ಮೇಳನದಲ್ಲಿ ನಿತ್ಯೋತ್ಸವ ಹೆಸರಿನ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಸಂಸ್ಥೆಯನ್ನು ಹುಟ್ಟುಹಾಕಿದ ಡಾ.ಲಾರಿ ಅಜಾದ್ ಅವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷೆ ಪ್ರೊ. ಮಮತಾ ಪಿ.ಆರ್., ಉಪಾಧ್ಯಕ್ಷೆ ಉಷಾ ನಟೇಶ್, ವಾರಿಜಾ ಜಗದೀಶ್, ಖಜಾಂಚಿ ಪಿ.ಎನ್. ಸರಸ್ವತಿ ಹಾಗೂ ಪ್ರಮುಖರಾದ ಕವಿತಾ, ಎಚ್.ಕೆ. ಅನುರಾಧ, ಮಾಲಿನಿ ಕಾನಡೆ, ಮಾಲಾ ರಾಮಚಂದ್ರ, ವಾಣಿ ಭಂಡಾರಿ, ಜಿ.ಕೆ. ಸಾವಿತ್ರಮ್ಮ, ಭಾರತಿ ರಾಮಕೃಷ್ಣ ಮುಂತಾದವರು ಇದ್ದರು.