ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಕಂದಾಯ ವಿಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ. ಇ-ಪೌತಿ ಖಾತಾ ಅಭಿಯಾನ, ದರಖಾಸ್ತ್ ಪೋಡಿ ಸೇರಿದಂತೆ ಹಲವು ವಿಭಾಗಗಳಲ್ಲಿ ಜಿಲ್ಲೆಯಲ್ಲಿ ಪ್ರಗತಿ ಕಡಿಮೆ ಇದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇ-ಪೌತಿ ಖಾತಾ ಅಭಿಯಾನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಗತಿ ಕಡಿಮೆ ಇದೆ. ಪ್ರತಿ ತಾಲೂಕಿನಲ್ಲಿ ಸಾವಿರಾರು ಕೇಸ್ ಬಾಕಿ ಉಳಿದಿವೆ. ಇದರಲ್ಲಿ ಕನಿಷ್ಠ ಶೇ.80ರಷ್ಟು ಪ್ರಗತಿ ಸಾಧಿಸುವತ್ತ ಅಧಿಕಾರಿಗಳು ಗಮನಹರಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ 89434 ಇ-ಪೌತಿ ಪ್ರಕರಣಗಳು ಇದ್ದು, 12726 ಪೂರ್ಣಗೊಂಡಿದೆ. 45470 ಪ್ರಕರಣಗಳು ಬಾಕಿ ಇದೆ. ಎರಡು, ಮೂರು ತಲೆಮಾರುಗಳ ಪ್ರಕರಣಗಳು ಕಷ್ಟ ಎಂಬ ಸಾಮಾನ್ಯ ಕಾರಣ ನೀಡದೇ ಪ್ರತಿ ಪ್ರಕರಣದಲ್ಲಿ ನಿಖರವಾದ ಕಾರಣ ತಿಳಿದು, ವಾರಸುದಾರರ ಮನವೊಲಿಸಿ ಕ್ರಮ ವಹಿಸಬೇಕು. 2021ರ ಸುತ್ತೋಲೆ ಪ್ರಕಾರ ಅಭಿಯಾನ ಮಾದರಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 75 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಹೊಸದಾಗಿ 29 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಸರ್ಕಾರಕ್ಕೆ ಒಂದೂ ಪ್ರಸ್ತಾವನೆಯೂ ಬಂದಿಲ್ಲ. ಇದು ಬಡವರ ಪರವಾದ ಕೆಲಸ ನಿರ್ಲಕ್ಷ್ಯ ಮಾಡಬೇಡಿ. ಮಾರ್ಚ್ 15ರೊಳಗೆ ಇದನ್ನು ಕಳಿಸಿ ಎಂದು ಸಚಿವರು ತಾಕೀತು ಮಾಡಿದರು.


ಜಿಲ್ಲೆಯಲ್ಲಿ 1283 ಅರ್ಜಿಗಳು ಸಲ್ಲಿಕೆಯಾಗಿದೆ. ಇದರದಲ್ಲಿ 959 ಅರ್ಜಿಗಳ ಸರ್ವೇ ಆಗಿದ್ದರೂ 108 ಮಾತ್ರ ಆರ್‌ಟಿಸಿ ಆಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಗತಿ ಶೂನ್ಯವಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಂದಾಯ ಗ್ರಾಮಗಳ ರಚನೆ:

ರಿಜಿಸ್ಟರ್ಡ್ ಸೇಲ್ ಡೀಡ್ ಇರುವುದನ್ನು ಬಿಟ್ಟು ಉಳಿದವರಿಗೆ ವಾಸಿಸುವ ಜಾಗಕ್ಕೆ ಹಕ್ಕುಪತ್ರ ನೀಡಬೇಕು. 4 ಸಾವಿರ ಅಡಿಗೆ ಒಂದು ಟೈಟಲ್ ಸಿಗುತ್ತದೆ. ಹಕ್ಕುಪತ್ರ ನೀಡುವುದರಿಂದ ವಾಸಿಸುವ ಮನೆಯಾದರೂ ಸ್ವಂತ ಆಗುತ್ತದೆ. ಅಧಿಕಾರಿಗಳು ಕಾನೂನಿನಲ್ಲಿ ಅವಕಾಶ ಇರುವುದನ್ನು ಮಾಡಿಕೊಡಬೇಕು. ಅರ್ಹರನ್ನು ಗುರುತಿಸಿ ಮಾರ್ಚ್ 16ರೊಳಗೆ ಹಕ್ಕುಪತ್ರ ನೀಡಲು ಕ್ರಮವಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.

ಮೋಜಿನಿ ವರದಿ:

ಮೋಜಿನಿ ಸರ್ವೆಗಾಗಿ 19462 ಅರ್ಜಿಗಳು ಬಂದಿದ್ದು, ಸರ್ವೇ ಇಲಾಖೆಯಲ್ಲಿ 10515 ಬಾಕಿ, ತಹಶಿಲ್ದಾರ್, ಎಸಿ ಕಚೇರಿಯಲ್ಲಿ 7032 ಬಾಕಿ ಸೇರಿದಂತೆ 13557 ಬಾಕಿ ಇದೆ. ಲಭ್ಯವಿರುವ ಸರ್ವೇಯರ್‌ಗಳು, ರೋವರ್‌ಗಳನ್ನು ಬಳಸಿಕೊಂಡು ಸಕಾಲಿಕವಾಗಿ ಸರ್ವೇ ಮಾಡಲು ಕ್ರಮ ವಹಿಸಬೇಕು. ಇಲಾಖೆ ಅಧಿಕಾರಿ, ನೌಕರರು ಆಸಕ್ತಿಯಿಂದ ಬಡವರ ಪರವಾಗಿ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಪ್ರಭುದೇವ ಕವಲಿಕಟ್ಟೆ, ಎಡಿಸಿ ಅಭಿಷೇಕ ಇತರ ಅಧಿಕಾರಿಗಳು ಹಾಜರಿದ್ದರು.

ತಹಸೀಲ್ದಾರ್‌ಗೆ ಸಚಿವ ಕೃಷ್ಣಬೈರೇಗೌಡ ತರಾಟೆ

ಇ-ಪೌತಿ ಖಾತಾ ಯೋಜನೆಯಡಿ ನಿರೀಕ್ಷಿತ ಗುರಿ ಸಾಧನೆ ಮಾಡದ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಅವರನ್ನು ಸಚಿವ ಕೃಷ್ಣಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.

ಇ-ಪೌತಿ ಖಾತಾ ಯೋಜನೆಯಡಿ ಶಿವಮೊಗ್ಗ ತಾಲೂಕಿನಲ್ಲಿ 10278 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 1578 ಪ್ರಕರಣಗಳು ಮಾತ್ರ ಮುಕ್ತಾಯಗೊಂಡಿವೆ. ಸಾಕಷ್ಟು ಪ್ರಕರಣಗಳು ಬಾಕಿ ಇದೆ. ಯಾಕಿಷ್ಟು ನಿರಾಶಕ್ತಿ ಎಂದು ಸಚಿವರು ತಹಸೀಲ್ದಾರ್ ಅವರಿಗೆ ಪ್ರಶ್ನಿಸಿದರು.

ಇನ್ನು ಮುಂದೆ ಪಹಣಿಯೊಂದಿಗೆ ಸ್ಕೆಚ್, ಆಕಾರ್ ಬಂದ್ ಮತ್ತು ಮ್ಯುಟೇಷನ್ ಸೇರಿ ಸಮಗ್ರ ದಾಖಲೆಗಳು ಜನರಿಗೆ ಲಭ್ಯವಾಗುವಂತಹ ಭೂ ಆಧಾರ್ ಎಂಬ ಯೋಜನೆಗೆ ನೀಲಿನಕ್ಷೆ ಹಾಕಿಕೊಳ್ಳಲಾಗಿದೆ. ದರಕಾಸ್ತು ಜಮೀನುಗಳ ಪೋಡಿ ಅಭಿಯಾನ ಶುರು ಮಾಡಿದೆ. ಹಿಂದಿನ ಐದು ವರ್ಷದಲ್ಲಿ 8542 ಪೋಡಿಯಾಗಿದ್ದರೆ 2025ರ ಜನವರಿಯಿಂದ 2026ರ ಜನವರಿಯೊಳಗೆ 1.93 ಲಕ್ಷ ಪೋಡಿ ಮಾಡುವ ಮೂಲಕ ರೈತರ ಭೂಮಿ ಮಾಲೀಕತ್ವಕ್ಕೆ ಖಚಿತತೆ ನೀಡಲಾಗಿದೆ.

ಕೃಷ್ಣ ಬೈರೇಗೌಡ, ಕಂದಾಯ ಸಚಿವ.