ಕಾಂಗ್ರೆಸ್ ಬೆಂಬಲಿಗರ ತೆಕ್ಕೆ ಸೇರಿದ ಶಿಮುಲ್

| Published : Aug 27 2024, 01:37 AM IST

ಸಾರಾಂಶ

ಶಿಮುಲ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ವಿದ್ಯಾಧರ ಅಧ್ಯಕ್ಷರಾಗಿ ಮತ್ತು ಚೇತನ್ ನಾಡಿಗರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿದ್ಯಾಧರ(ಗುರುಶಕ್ತಿ) ಮತ್ತು ಉಪಾಧ್ಯಕ್ಷರಾಗಿ ಚೇತನ್ ಎಸ್. ನಾಡಿಗರ ಅವಿರೋಧವಾಗಿ ಆಯ್ಕೆಯಾದರು.

ಸೋಮವಾರ ಮಾಚೇನಹಳ್ಳಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾಧರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚೇತನ್ ನಾಡಿಗರ ಮಾತ್ರ ನಾಮಪತ್ರ ಸಲ್ಲಿಸಿದರು. ಅಂತಿಮವಾಗಿ ಚುನಾವಣಾಧಿಕಾರಿಗಳು ಇವರನ್ನು ವಿಜಯಿ ಎಂದು ಘೋಷಿಸಿದರು. ಒಟ್ಟು 14 ನಿರ್ದೇಶಕ ಸ್ಥಾನಕ್ಕೆ ಆ. 14 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9, ಬಿಜೆಪಿ ಬೆಂಬಲಿತ 3, ಜೆಡಿಎಸ್ ಬೆಂಬಲಿತ 1 ಮತ್ತು ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳದ ಒಬ್ಬರು ಆಯ್ಕೆಯಾಗಿದ್ದರು. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಹಿರಿಯ ಸಹಕಾರಿ ಆರ್.ಎಂ. ಮಂಜುನಾಥಗೌಡರ ಬೆಂಬಲಿಗರಾಗಿ ಆಯ್ಕೆಯಾದ 9 ಮಂದಿ ಗುಂಪಿಗೆ ದಕ್ಕುವುದು ಖಚಿತವಾಗಿತ್ತು.

ಇದರಂತೆ ಸೋಮವಾರ ಬೆಳಗ್ಗೆ ಆರ್.ಎಂ.ಮಂಜುನಾಥಗೌಡರ ನೇತೃತ್ವದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಆಯ್ಕೆ ನಡೆಯಿತು.

ಮತ್ತೊಮ್ಮೆ ತಮ್ಮ ಸಾಮರ್ಥ್ಯ ದಾಖಲಿಸಿದ ಮಂಜುನಾಥಗೌಡರು:

ಜಿಲ್ಲೆಯ ಸಹಕಾರಿ ವಲಯದಲ್ಲಿ ಹಿರಿಯ ಸಹಕಾರಿ ಆರ್.ಎಂ.ಮಂಜುನಾಥಗೌಡರು ಕಳೆದ ಎರಡು ದಶಕಗಳಿಂದ ಹಿಡಿತ ಸಾಧಿಸಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ಸತತವಾಗಿ ತಮ್ಮದೇ ಪಾರುಪತ್ಯ ಸ್ಥಾಪಿಸಿದ್ದ ಅವರು ಕಳೆದ ದಶಕದಿಂದೀಚೆ ಶಿಮುಲ್ ನಲ್ಲಿಯೂ ತಮ್ಮದೇ ಹಿಡಿತ ಸಾಧಿಸಿದ್ದರು. ಈ ಬಾರಿ ಡಿಸಿಸಿ ಬ್ಯಾಂಕ್ ಮೇಲಿನ ಇವರ ಹಿಡಿತ ಸಡಿಲಿಸಲು ಬಿಜೆಪಿ ಎಲ್ಲ ರೀತಿಯ ತಯಾರಿ ನಡೆಸಿ ಚುನಾವಣಾ ಕಣಕ್ಕೆ ಇಳಿದಿತ್ತು. ಆದರೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕೇವಲ ಮೂರು ಸ್ಥಾನಗಳನ್ನಷ್ಟೇ ಗಳಿಸಲು ಸಾಧ್ಯವಾಗಿತ್ತು.

ಬಳಿಕ ನಡೆದ ಶಿಮುಲ್ ಚುನಾವಣೆಯಲ್ಲಿಯೂ ಮತ್ತೆ ಬಿಜೆಪಿ ತನ್ನ ಪ್ರಯತ್ನ ಮುಂದುವರೆಸಿತ್ತು. ಆದರೆ ಈ ಚುನಾವಣೆಯಲ್ಲಿಯೂ ಬಿಜೆಪಿಗೆ ಮುಖಭಂಗ ಎದುರಾಗಿತ್ತು. ಆರ್. ಎಂ. ಮಂಜುನಾಥಗೌಡರ ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿತು.