ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು ಪಿಎಂಶ್ರೀ ಯೋಜನೆಗೆ ಒಳಪಟ್ಟಿರುವುದು ಸಂತಸ ತಂದಿದೆ ಹಾಗೂ 2025-26 ನೇ ಸಾಲಿಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭವಾಗಲಿದ್ದು, ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಿ ಎಂದು ಶಾಲೆಯ ಮಖ್ಯ ಶಿಕ್ಷಕ ನರಸಿಂಹಯ್ಯ ಹೇಳಿದರು. ಅವರು ನಗರದ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಶಾರದಾ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿರಾದ ಈ ಶಾಲೆ 100 ವರ್ಷಗಳನ್ನು ಪೂರೈಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ. ಇಡೀ ರಾಜ್ಯದಲ್ಲಿ 555 ಶಾಲೆಗಳು ಪಿಎಂಶ್ರೀ ಯೋಜನೆಗೆ ಒಳಪಟ್ಟಿದ್ದು, ಅದರಲ್ಲಿ ನಮ್ಮ ಸರ್ಕಾರಿ ಶಾಲೆಯೂ ಕೂಡ ಒಂದಾಗಿದೆ ಎಂದ ಅವರು ನಮ್ಮ ಜೆಕೆಎಂಎಚ್‌ಪಿಬಿಎಸ್ ಶಾಲೆಯು ಇನ್ನೂ ಉನ್ನತಮಟ್ಟಕ್ಕೆ ಅಭಿವೃದ್ಧಿಯಾಗಲಿ ಎಂದರು. ನಗರಸಭಾ ಸದಸ್ಯ ಎಸ್.ಎಲ್.ರಂಗನಾಥ್ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು ಪಿಎಂಶ್ರೀ ಯೋಜನೆಗೆ ಒಳಪಟ್ಟಿರುವುದು ತಾಲೂಕಿಗೆ ಹೆಮ್ಮೆ ತರುವ ವಿಚಾರ ಪಿಎಂಶ್ರೀ ಯೋಜನೆಯಿಂದ ಕೇಂದ್ರ ಸರ್ಕಾರದ ಅನುದಾನ ದೊರಕಲಿದ್ದು, ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಾಗೂ ಈ ವರ್ಷದಿಂದ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ 7ನೇ ತರಗತಿಯವರೆಗೆ ಶಿಕ್ಷಣ ದೊರಕಲಿದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆ ಪಡೆಯಿರಿ ಎಂದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್ ಮಾತನಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಎಲ್‌ಕೆಜಿ, ಯುಕೆಜಿಗೆ ಸೇರಿಸಬೇಕೆಂಬ ಕನಸು ನಮ್ಮ ಸರ್ಕಾರಿ ಶಾಲೆಯಲ್ಲಿಯೇ ನನಸಾಗುತ್ತಿದೆ. ಖಾಸಗಿ ಶಾಲೆಯಲ್ಲಿ ಓದಿದರಷ್ಟೆ ಬುದ್ದಿವಂತರಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದವರೂ ಸಹ ಉನ್ನತ ಹುದ್ದೆ ಪಡೆದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳ ನಮ್ಮ ದೇಶದಲ್ಲಿಯೇ ಇದ್ದು ದೇಶಕ್ಕೆ ಸೇವೆ ಸಲ್ಲಿಸುತ್ತಾರೆ. ಖಾಸಗಿ ಶಾಲೆಯಲ್ಲಿ ಓದಿದವರು ವಿದೇಶಕ್ಕೆ ಹೋಗುತ್ತಾರೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ. ಸರ್ಕಾರಿ ಶಾಲೆಗಳನ್ನು ಕೇವಲ ಸರ್ಕಾರಗಳು ಅಭಿವೃದ್ಧಿ ಮಾಡಬೇಕು ಎಂಬ ಭಾವನೆಯನ್ನು ಬಿಟ್ಟು ಎಲ್ಲರೂ ಕೈಜೋಡಿಸುವ ಮೂಲಕ ಅಭಿವೃದ್ಧಿ ಮಾಡಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಸರ್ಕಾರಿ ಶಾಲೆಗಳು ನಮ್ಮ ಆಸ್ತಿ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ವೀರಣ್ಣ, ದ್ರಾಕ್ಷಾಯಿಣಿ, ಅನಿತಾ, ಕೆಂಚಮ್ಮ, ವಿಜಯಮ್ಮ, ಮುದ್ದಣ್ಣ, ದೀಪಿಕಾ, ರಾಜೇಶ್ವರಿ, ರಂಗನಾಥ್, ಫೈಯಜ್, ಎಸ್.ಡಿ.ಎಂ.ಸಿ ಸದಸ್ಯರಾದ ಶಿವ ಶೇಖರ್, ಮಹೇಶ್, ನಜೀರ್, ಸತೀಶ್ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.