26ಕ್ಕೆ ಶಿರಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Dec 19 2023, 01:45 AM IST

ಸಾರಾಂಶ

ಶಿರಾ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ. 26 ರಂದು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಂಡುರಂಗಯ್ಯ ಮಾಹಿತಿ

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ. 26 ರಂದು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಹೇಳಿದರು.

ಡಿ.26ರ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಚ.ಹ.ರಘುನಾಥ್ ಅವರ ಮೆರವಣಿಗೆ ನಡೆಯಲಿದೆ. ಅಂಬೇಡ್ಕರ್ ವೃತ್ತದಿಂದ ಕಲ್ಯಾಣ ಮಂಟಪ, ಖಾಸಗಿ ಬಸ್ ನಿಲ್ದಾಣ, ಹಳೆ ರಾ.ಹೆ. ಮೂಲಕ ಶ್ರೀ ವಿವೇಕಾನಂದ ಕ್ರೀಡಾಂಗಣದ ಕಸ್ತೂರಿ ರಂಗಪ್ಪನಾಯಕನ ವೇದಿಕೆಗೆ ಕರೆತರಲಾಗುವುದು. ಸಮ್ಮೇಳನದ ಉದ್ಘಾಟನೆಯಲ್ಲಿ ರಾಜ್ಯ ಸರ್ಕಾರಿದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ, ಆರ್.ರಾಜೇಂದ್ರ, ವೈ.ಎ.ನಾರಾಯಣಸ್ವಾಮಿ, ಕೆ.ಎ.ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ನಡೆಯಲಿದೆ. ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ೨೦ ಕ್ಕೂ ಹೆಚ್ಚು ಕವಿಗಳು, ಸಾಹಿತಿಗಳು ಭಾಗವಹಿಸುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಪುರಸ್ಕಾರ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ೮ ರಿಂದ ೧೨ ರವರೆಗೆ ಕನ್ನಡ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

5 ವರ್ಷಗಳ ಹಿಂದೆ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಕಳೆದ ವರ್ಷ ಹುಲಿಕುಂಟೆ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ದೊಡ್ಡಬಾಣಗೆರೆ ಮಾರಣ್ಣ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು. ನಾಡೋಜ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ನಂತರ ಗಡಿನಾಡ ಜಾನಪದ ಸಮ್ಮೇಳನ ದ್ವಾರನಕುಂಟೆ ಗ್ರಾಮದಲ್ಲಿ ನಡೆಯಿತು. ಈ ವರ್ಷ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಈ ಕನ್ನಡದ ಹಬ್ಬಕ್ಕೆ ಸರ್ಕಾರದ ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು, ನಗರಸಭೆ, ಕನ್ನಡಪರ ಸಂಘಟನೆಗಳು, ಇತರ ಸಂಘಸಂಸ್ಥೆಗಳು ನೆರವನ್ನು ಕೊಟ್ಟು ಸಹಕಾರ ನೀಡಿದ್ದಾರೆ. ಸಡಗರದಿಂದ ಕನ್ನಡ ಹಬ್ಬ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಸಂಘಟನಾ ಕಾರ್ಯದರ್ಶಿ ಹೆಂದೊರೆ ಶಿವಣ್ಣ, ಗೌರವ ಕಾರ್ಯದರ್ಶಿ ಡಿ.ಎಚ್. ಪರಮೇಶ್ ಗೌಡ, ದ್ವಾರನಕುಂಟೆ ಲಕ್ಷ್ಮಣ್, ಧರಣಿಕುಮಾರ್, ರಂಗರಾಜು, ಜಯರಾಮಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

--- ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ನ ದ್ವಾರನಕುಂಟೆ ಲಕ್ಷ್ಮಣ್, ಹೆಂದೊರೆ ಶಿವಣ್ಣ, ಧರಣಿಕುಮಾರ್, ರಂಗರಾಜು ಮತ್ತಿತರರು ಹಾಜರಿದ್ದರು.