ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದುಕೊಂಡು ಸಹಕಾರ ಕ್ಷೇತ್ರದಿಂದ ರೈತರಿಗೆ, ಕೃಷಿಕರಿಗೆ ತ್ವರಿತವಾಗಿ ಆರ್ಥಿಕ ಸಹಕಾರವನ್ನು ಸಂಘದ ವತಿಯಿಂದ ನೀಡಿರುವುದಲ್ಲದೆ ತನ್ನ ಕಾರ್ಯ ವ್ಯಾಪ್ತಿಯಲ್ಲಿ ವಿವಿಧ ರೀತಿಯಲ್ಲಿ ಸಮಾಜ ಮುಖಿ ಸೇವೆಯೊಂದಿಗೆ ಸಮಾಜದ ಬೇಕು, ಬೇಡ ಮತ್ತು ಸಮಸ್ಯೆಗಳ ಬಗ್ಗೆ ಸರಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ನಿರಂತರವಾಗಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರಭಾಕರ ಪ್ರಭುವಿಗೆ ಅರ್ಹವಾಗಿಯೇ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ಲಭ್ಯವಾಗಿದ್ದು ಸಮಾಜದ ಧ್ವನಿಗೆ ಸಂದ ಗೌರವ ವಾಗಿದೆ ಎಂದೂ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಂಘದ ಸಭಾಂಗಣದಲ್ಲಿ ಕನ್ನಡ ಪ್ರಭ ಪತ್ರಿಕೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಕೊಡಮಾಡುವ ಕರ್ನಾಟಕ ಸಹಕಾರ ಶಿರೋಮಣಿ 2025 ಪ್ರಶಸ್ತಿ ಲಭಿಸಿರುವ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಸಂಘದ ವತಿಯಿಂದ ಗೌರವಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ಆಚಾರ್ಯ, ನಿರ್ದೇಶಕರಾದ ವೆಂಕಟೇಶ್ ನಾವುಡ, ದಿನೇಶ್ ಪೂಜಾರಿ, ತನಿಯಪ್ಪ ಗೌಡ, ರಾಮ ನಾಯ್ಕ, ಕೃಷ್ಣಮೂರ್ತಿ ಬಿ. ಕೆ., ಜ್ಞಾನೇಶ್ವರ ಪ್ರಭು, ನಾರಾಯಣ ಪೂಜಾರಿ, ಸಂತೋಷ ಕುಮಾರ್ ಶೆಟ್ಟಿ, ಉದಯ ಕುಮಾರ್, ಶೀಲಾ, ಸವಿತಾ ಡಿ ಸೋಜ ಹಾಗೂ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.ಸಂಘದ ನಿರ್ದೇಶಕರಾದ ಪ್ರಮೋದ್ ಕುಮಾರ್ ರೈ ಸ್ವಾಗತಿಸಿದರು, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧರ್ಮಪಾಲ ಭಂಡಾರಿ ವಂದಿಸಿದರು.