ಸಾರಾಂಶ
ಡೈವಿಂಗ್ ಮಾಡುತ್ತಿದ್ದಾಗ ಹಗ್ಗ ಕೈಜಾರಿ ಈಶ್ವರ ಮಲ್ಪೆ ಗಂಗಾವಳಿ ನದಿಯಲ್ಲಿ ಸುಮಾರು ನೂರು ಮೀಟರ್ ದೂರ ತೇಲಿಹೋದರು. ತಕ್ಷಣ ಎರಡು ಬೋಟ್‌ಗಳು ಧಾವಿಸಿ ಸುರಕ್ಷಿತವಾಗಿ ಕರೆತಂದರು.
ವಸಂತಕುಮಾರ್ ಕತಗಾಲ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದವರ ಪತ್ತೆಗೆ ಶನಿವಾರ ಮುಳುಗು ತಜ್ಞ ಈಶ್ವರ ಮಲ್ಪೆ ಮೂರು ಪಾಯಿಂಟ್‌ಗಳಲ್ಲಿ 8 ಬಾರಿ ಡೈವ್ ಮಾಡಿದರೂ ಲಾರಿಯಾಗಲಿ, ಯಾರೊಬ್ಬರ ದೇಹವಾಗಲಿ ಪತ್ತೆಯಾಗಿಲ್ಲ. ನದಿಯ ಆಳದಲ್ಲಿ ರಾಶಿಬಿದ್ದ ಬಂಡೆಗಳು, ಮಣ್ಣು ಹಾಗೂ ನೀರಿನ ಹರಿವಿನ ವೇಗ ಶೋಧ ಕಾರ್ಯಕ್ಕೆ ಅಡ್ಡಿಯಾಯಿತು. ಡೈವಿಂಗ್ ಮಾಡುತ್ತಿದ್ದಾಗ ಹಗ್ಗ ಕೈಜಾರಿ ಈಶ್ವರ ಮಲ್ಪೆ ಗಂಗಾವಳಿ ನದಿಯಲ್ಲಿ ಸುಮಾರು ನೂರು ಮೀಟರ್ ದೂರ ತೇಲಿಹೋದರು. ತಕ್ಷಣ ಎರಡು ಬೋಟ್‌ಗಳು ಧಾವಿಸಿ ಸುರಕ್ಷಿತವಾಗಿ ಕರೆತಂದರು. ಕಾರ್ಯಾಚರಣೆ ಹೇಗಿತ್ತು?: ಗಂಗಾವಳಿ ನದಿಯಲ್ಲಿ ಲಾರಿಯಂತಹ ವಸ್ತುಗಳಿವೆ ಎಂದು ಗುರುತಿಸಿದ ಪಾಯಿಂಟ್‌ನ ಮೇಲ್ಭಾಗದಲ್ಲಿ ಒಂದು ಬೋಟ್ ಹಾಗೂ ಕೆಳಭಾಗದಲ್ಲಿ ಒಂದು ಬೋಟ್ ಲಂಗರು ಹಾಕಲಾಗಿತ್ತು. ಕಟ್ಟಲಾದ ಹಗ್ಗದ ಸಹಾಯದಿಂದ ಎರಡೂ ಬೋಟ್‌ಗಳ ನಡುವೆ ಈಶ್ವರ ಮಲ್ಪೆ ಸ್ಕೂಬಾ ಡೈವಿಂಗ್ ಸಲಕರಣೆಗಳೊಂದಿಗೆ ಡೈವ್ ಮಾಡಿದರು. ಇವರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನಾಪಡೆಗಳು ಸಾಥ್ ನೀಡಿದವು. ಡ್ರೋನ್ ಕೂಡ ಪತ್ತೆ ಕಾರ್ಯಕ್ಕೆ ಬಳಸಲಾಗಿತ್ತು. ಹೀಗೆ ಮೂರು ಪಾಯಿಂಟ್‌ಗಳಲ್ಲಿ ಈಶ್ವರ ಮಲ್ಪೆ ಶೋಧ ನಡೆಸಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕಾರ್ಯಾಚರಣೆಯ ಮಾಹಿತಿ ಪಡೆದು ವೀಕ್ಷಿಸಿದರು. ಸ್ಥಳದಲ್ಲಿ ಶಾಸಕ ಸತೀಶ ಸೈಲ್ ಇದ್ದರು. ಈ ನಡುವೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರೂರು ದುರಂತ ಸ್ಥಳಕ್ಕೆ ಭೇಟಿ ಮಾಡಿ ಕಾರ್ಯಾಚರಣೆಯ ಮಾಹಿತಿ ಪಡೆದರು. ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಇದ್ದರು. ದುರಂತ ನಡೆದು 12 ದಿನಗಳಾದರೂ ಕಣ್ಮರೆಯಾದ ಕೇರಳದ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಪತ್ತೆಯಾಗದೆ ಇರುವುದು ಅವರ ಕುಟುಂಬ ಹಾಗೂ ಆಪ್ತರಲ್ಲಿ ತೀವ್ರ ಕಳವಳ ಹುಟ್ಟಿಸಿದೆ. ಕಾರ್ಯಾಚರಣೆ ಮುಂದುವರಿಕೆ: ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ನೌಕಾಪಡೆ, ಸೇನಾಪಡೆ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತಂಡ ಗುರುತಿಸಿದ ನಾಲ್ಕು ಪಾಯಿಂಟ್‌ಗಳಲ್ಲಿ ಮೂರು ಪಾಯಿಂಟ್‌ಗಳಲ್ಲಿ ಶೋಧ ನಡೆಸಿದರೂ ಯಾವುದೂ ಪತ್ತೆಯಾಗಿಲ್ಲ. ಭಾನುವಾರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.