ಕಾರ್ಯಾಚರಣೆಯಲ್ಲಿ ನಾಲ್ಕು ಕಬ್ಬಿಣದ ಅಂಶಗಳು ಪತ್ತೆಯಾಗಿದ್ದು, ಇದು ವಿದ್ಯುತ್ ಟವರ್, ಅಂಗಡಿ ಮುಂಗಟ್ಟಿನ ಕಬ್ಬಿಣದ ರೇಲಿಂಗ್ಸ್‌ಗಳು ಹಾಗೂ ಅರ್ಜುನ್ ಇದ್ದರು ಎನ್ನಲಾದ ಲಾರಿ ಮತ್ತು ಈಗಾಗಲೇ ದೊರೆತಿದ್ದ ಟ್ಯಾಂಕರನ ಕ್ಯಾಬಿನ್‌ದ್ದಾಗಿದೆ.

ಅಂಕೋಲಾ: ಶಿರೂರು ದುರಂತಕ್ಕೆ ಸಂಬಂಧಿಸಿದಂತೆ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅತ್ಯುನ್ನತ ತಂತ್ರಜ್ಞಾನದ ರಾಡಾರ್‌ಗೆ ನಾಲ್ಕು ಕಬ್ಬಿಣದ ಅಂಶಗಳು ಪತ್ತೆಯಾಗಿದೆ. ಅರ್ಜುನ ಹಾಗೂ ಇತರರ ಪತ್ತೆಗೆ ವಿಶೇಷವಾಗಿ ಶ್ರಮ ವಹಿಸಲಾಗುತ್ತಿದ್ದು, ಶುಕ್ರವಾರ ಸಂಜೆಯ ಒಳಗೆ ಕಾರ್ಯಾಚರಣೆ ಪೂರ್ಣಗೊಳಿಸುತ್ತೇವೆ ಎಂದು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತಿಳಿಸಿದರು.ಶಿರೂರು ದುರಂತದ ರಕ್ಷಣಾ ಕಾರ್ಯದಲ್ಲಿ ಗುರುವಾರ ನಡೆದ ಬೆಳವಣಿಗೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಕಾರ್ಯಾಚರಣೆಯಲ್ಲಿ ನಾಲ್ಕು ಕಬ್ಬಿಣದ ಅಂಶಗಳು ಪತ್ತೆಯಾಗಿದ್ದು, ಇದು ವಿದ್ಯುತ್ ಟವರ್, ಅಂಗಡಿ ಮುಂಗಟ್ಟಿನ ಕಬ್ಬಿಣದ ರೇಲಿಂಗ್ಸ್‌ಗಳು ಹಾಗೂ ಅರ್ಜುನ್ ಇದ್ದರು ಎನ್ನಲಾದ ಲಾರಿ ಮತ್ತು ಈಗಾಗಲೇ ದೊರೆತಿದ್ದ ಟ್ಯಾಂಕರನ ಕ್ಯಾಬಿನ್‌ದ್ದಾಗಿದೆ ಎಂದರು.ಭಾರತ ಬೆಂಜ್ ಲಾರಿಯಲ್ಲಿ ಕಟ್ಟಿಗೆಗಳು ತುಂಬಿರುವುದರಿಂದ ಹಾಗೂ ಗಾಳಿ ನಿರೋಧಕ ಕ್ಯಾಬಿನ್ ಹೊಂದಿರುವುದರಿಂದ ಲಾರಿಯು ಬಿದ್ದ ಸ್ಥಳದಿಂದ ತೇಲಿ ಹೋಗುವ ಸಾಧ್ಯತೆಗಳಿದ್ದವು.ಆದರೆ ದುರಂತ ಸಂಭವಿಸಿದ ಸ್ಥಳದಿಂದ ಅಂದರೆ ಗುಡ್ಡದ ಮಣ್ಣು ನದಿಗೆ ಬಿದ್ದ ಸ್ಥಳದಿಂದ 80 ಮೀಟರ್ ದೂರದಲ್ಲಿ ವಾಹನ ಇದ್ದು, ಮಣ್ಣು ಇದ್ದ ಸ್ಥಳದಲ್ಲಿಯೆ ಇರುವುದು ಖಚಿತಗೊಂಡಿದೆ. ಹೀಗಾಗಿ ಲಾರಿಯು ನೀರಿಗೆ ಕೊಚ್ಚಿ ಹೋಗಿಲ್ಲ. ನದಿಯಲ್ಲಿ ಬಿದ್ದ ಮಣ್ಣಿನಲ್ಲೆ ಸಿಲುಕಿದೆ. ದೂರದಲ್ಲಿ ಕಟ್ಟಿಗೆಗಳು ಬೇರ್ಪಡೆಯಾಗಿರುವ ಗುರುತು ಸಿಕ್ಕಿದೆ ಎಂದರು.ಅರ್ಜುನನ ಪತ್ತೆಗಾಗಿ ವಿಶೇಷ ಸ್ಕಾನಿಂಗ್ ಮಾಡಲಾಗುತ್ತಿದೆ. ನೀರಿನ ಎತ್ತರವನ್ನು ನಾಲ್ಕು ಭಾಗಗಳಾಗಿ ವಿಗಂಡಣೆ ಮಾಡಲಾಗಿದೆ. ಇದರಲ್ಲಿ ಕೆಳ ಹಾಗೂ ಅತಿ ಕೆಳಮಟ್ಟದಲ್ಲಿ ಅರ್ಜುನಗಾಗಿ ಶೋಧ ನಡೆಸಲಾಗಿದೆ. ಭಾರತ ಬೆಂಜ್ ಲಾರಿಯಲ್ಲಿ ಸುಮಾರು 600 ಕಟ್ಟಿಗೆ ತುಂಡುಗಳನ್ನು ಲೋಡ್ ಮಾಡಿಕೊಂಡಿತ್ತು. ಮಣ್ಣು ದೂಡಿದ ರಭಸಕ್ಕೆ ನದಿಯಲ್ಲಿ ಬಿದ್ದು ಕ್ಯಾಬಿನ್ ಮತ್ತು ಲೋಡರ್ ತುಂಡಾಗಿರಬಹುದು. ಆದರೆ ಲಾರಿಯ ತೂಕ ಹೆಚ್ಚಿರುವುದರಿಂದ ಅದು ತೇಲಿ ಹೋಗಲು ಸಾಧ್ಯವಿಲ್ಲ. ಗುರುವಾರ ರಾತ್ರಿಯೂ ಎಡೆಬಿಡದೆ ಕಾರ್ಯಾಚರಣೆ ನಡೆಸಲು ಮುಂದಾಗಿದ್ದೇವೆ. ಶುಕ್ರವಾರದ ಸಂಜೆಯ ವೇಳೆಗೆ ಕಾರ್ಯಾಚರಣೆಯ ಸಂಪೂರ್ಣ ಚಿತ್ರಣ ನೀಡುತ್ತೇವೆ ಎಂದರು.ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತಂಡ ಗುರುವಾರ ಕಾರ್ಯಾಚರಣೆ ಮಾಡಿದ್ದು, ಗುರುವಾರ ರಾತ್ರಿ ಇಲ್ಲವೇ ಶುಕ್ರವಾರ ಬೆಳಗ್ಗೆ ಪೂರ್ಣ ವರದಿ ನೀಡಲಿದ್ದಾರೆ. ಅದರ ನಂತರವೇ ಲಾರಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿದು ಬರಲಿದೆ ಎಂದರು.ಶಾಸಕ ಸತೀಶ್ ಸೈಲ್ ಮಾತನಾಡಿ, ಬುಧವಾರ ನೌಕಾಪಡೆ ಮತ್ತು ಮಿಲಿಟರಿ ತಂಡದವರು ನೀಡಿದ ಮತ್ತು ಇಂದು ಇಂದ್ರಬಾಲನ್ ತಂಡ ನೀಡಿದ ಎರಡು ಸ್ಥಳಗಳು ಹೊಂದಾಣಿಕೆಯಾಗಿವೆ. ಇಂದು ಶೋಧಿಸಿದ ಒಂದು ಸ್ಥಳ ಸೇರಿದಂತೆ ಮೂರು ಸ್ಥಳವನ್ನು ನಿರ್ದಿಷ್ಟವಾಗಿ ಡ್ರೋಣ್ ಮೂಲಕ ಸೆರೆ ಹಿಡಿದ ಚಿತ್ರಗಳಿಂದ ಬಹುತೇಕ ತಡರಾತ್ರಿ ಖಚಿತಪಡಿಸಲಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ, ಕಳೆದ 11 ದಿನಗಳಿಂದ ವಿವಿಧ ರೀತಿಯಲ್ಲಿ ಕಾಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆಗೆ ಜಿಲ್ಲಾಡಳಿತ ಮತ್ತು ಕ್ಷೇತ್ರದ ಶಾಸಕ ಸತೀಶ ಸೈಲ್ ಅವರು ಕಾರ್ಯಾಚರಣೆಯ ವೇಗಕ್ಕೆ ಹೆಚ್ಚಿನ ಬಲ ನೀಡಿದ್ದಾರೆ. ಹಾಗೆ ರಾಡಾರ್ ಸೋನಾರ್ ತಾಂತ್ರಿಕ ಸಲಕರಣೆಗಳಿಂದ ಕೂಡ ಕಾರ್ಯಾಚರಣೆ ಕೈಗೊಳ್ಳಲಾಗಿದೆ.