ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಮಾನವಿಕ ವಿಭಾಗದಿಂದ ‘ಯುವಜನತೆಯ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಒಳಿತು ಕೆಡುಕುಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಿದರು.ವಿದ್ಯಾರ್ಥಿ ಜಿವನ ಎಂಬುದು ಅಮೂಲ್ಯವಾಗಿದ್ದು, ಶಿಸ್ತು, ಬದ್ಧತೆ ಹಾಗೂ ಉನ್ನತ ಗುರಿಯ ಸಾಧನೆಗಾಗಿ ಶ್ರಮಿಸಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳು ಸಮಾಜದ ಆರೋಗ್ಯವನ್ನು ಬಿತ್ತರಪಡಿಸುತ್ತಿವೆ. ಖಿನ್ನತೆ, ಕ್ರೌರ್ಯ ಹಾಗೂ ಹಿಂಸೆ ಸಮಾಜವನ್ನು ಕೆಡಿಸದಂತೆ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಎಚ್ಚರ ವಹಿಸಬೇಕು. ಪ್ರಸ್ತುತ ಕಾಲದಲ್ಲಿ ನೈತಿಕ ಶಿಕ್ಷಣದ ಅಗತ್ಯ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕವಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ, ವಿದ್ಯಾರ್ಥಿ ದೆಸೆಯಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವ ಅಗತ್ಯಕ್ಕಿಂತ ಹೆಚ್ಚಾಗಬಾರದು, ವಿದ್ಯಾರ್ಥಿಗಳು ತಮ್ಮ ಗುರಿಯಿಂದ ವಿಮುಖರಾಗಬಾರದು ಎಂದು ಕಿವಿಮಾತು ಹೇಳಿದರು.ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರಶಾಂತಿ ಸ್ವಾಗತಿಸಿದರು. ಶ್ರಾವ್ಯ ದ್ವಿತೀಯ ಬಿ.ಎ. ವಂದಿಸಿದರು. ಪ್ರತಿಜ್ಞಾ ತೃತೀಯ ಬಿ.ಎ. ನಿರೂಪಿಸಿದರು.