ಸಾರಾಂಶ
ಕಳೆದ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಶಿರ್ವ ಮಹಿಳಾ ಮಂಡಲ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ಆಟಿದ ಕೂಟ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಪ್ರತೀಯೊಬ್ಬರೂ ತಮ್ಮ ಮಕ್ಕಳು ಎಂಜಿನಿಯರ್ ಅಥವಾ ವೈದ್ಯರೇ ಆಗಬೇಕು ಎಂಬ ಆಕಾಂಕ್ಷೆ ಇಟ್ಟುಕೊಳ್ಳುತ್ತಾರೆಯೇ ಹೊರತು ತಮ್ಮ ಮಗ/ಮಗಳು ಸೈನ್ಯಕ್ಕೆ ಸೇರಿ ಈ ದೇಶ ಕಾಯುವ ಯೋಧನಾಗಲಿ ಎಂದು ಯೋಚಿಸದೇ ಇರುವುದು ಬೇಸರ ತರುವ ವಿಚಾರ ಎಂದು ಶಿರ್ವ ಗ್ರಾಮದ ನಿವೃತ್ತ ಯೋಧ ರಾಜೇಂದ್ರ ಪಾಟ್ಕರ್ ಕೋಡುಗುಡ್ಡೆ ಹೇಳಿದರು.ಕಳೆದ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಶಿರ್ವ ಮಹಿಳಾ ಮಂಡಲ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ಆಟಿದ ಕೂಟ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಹೆತ್ತವರು ತಮ್ಮ ಮಕ್ಕಳಿಗೆ ಸೈನ್ಯಕ್ಕೆ ಸೇರುವಲ್ಲಿ ಪ್ರೇರಣೆ, ಮಾರ್ಗದರ್ಶನ ನೀಡಿ ತಯಾರು ಮಾಡಿದರೆ ಮಾತ್ರ ಮನೆಮನೆಗಳಲ್ಲಿ ಸೈನಿಕರು ಹುಟ್ಟಿಕೊಳ್ಳಲು ಸಾಧ್ಯವಿದೆ ಎಂಬುದಾಗಿ ಸಲಹೆ ನೀಡಿದರು.ನೇಗಿಲು, ನೊಗ, ಅಡಕೆ, ಹಾಳೆ ಮುಟ್ಟಾಳೆಗಳೊಂದಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮೂಡುಬೆಳ್ಳೆಯ ಅಪ್ಪಿ ಪಾಣಾರ ಅವರು ತೆಂಬರೆ ಬಡಿಯುತ್ತಾ ಪಾಡ್ದನ ಹಾಡುತ್ತಾ ಬರುವುದರೊಂದಿಗೆ ವಿನೂತನ ರೀತಿಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ವೇದಿಕೆಯಲ್ಲಿ ಸಿರಿತುಪ್ಪೆಗೆ ಹೂ ಅರ್ಪಿಸಿ ಶಿರ್ವದ ತೆರಿಗೆ ಸಲಹೆಗಾರರಾದ ರಮಾನಂದ ಶೆಟ್ಟಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿರಿತುಪ್ಪೆಗೆ ಮಹಿಳೆಯರು ಆರತಿ ಬೆಳಗಿ ನಮಸ್ಕರಿಸಿದರು.ಮಹಿಳಾ ಮಂಡಲ ಅಧ್ಯಕ್ಷೆ ಡಾ.ಸ್ಪೂರ್ತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಗೀತಾ ವಾಗ್ಳೆ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ನವೀನ್ ಶೆಟ್ಟಿ ಕುತ್ಯಾರು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.ಪರಿಸರದ ಪುಟಾಣಿಗಳಿಗಾಗಿ ಛದ್ಮವೇಷ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು. ಮಹಿಳಾ ಮಂಡಲದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಯಶ್ರೀ ಜಯಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಐರಿನ್ ಲಸ್ರಾದೊ, ಮಾಲತಿ ಮುಡಿತ್ತಾಯ ಮತ್ತು ಜ್ಯೋತಿ ಸುಧೀರ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸುನೀತಾ ಕಳತ್ತೂರು ಬಹುಮಾನದ ಪಟ್ಟಿಯನ್ನು ವಾಚಿಸಿದರು. ಹಿರಿಯ ಜಾನಪದ ಕಲಾವಿದೆ ಅಪ್ಪಿ ಪಾಣಾರ ಅವರನ್ನು ಗೌರವಿಸಲಾಯಿತು. ಕೊನೆಯಲ್ಲಿ ಎಲ್ಲರಿಗೂ ಆಟಿ ತಿಂಗಳ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಲಾಯಿತು.