ಶಿಷ್ಯ ಸ್ವೀಕಾರ ಮಹೋತ್ಸವ ಸ್ವರ್ಣವಲ್ಲೀ ಮಠದ ಚರಿತ್ರೆಯಲ್ಲಿ ವಿಶಿಷ್ಟ, ವಿಶೇಷ ದಾಖಲು

| Published : Feb 24 2024, 02:33 AM IST

ಶಿಷ್ಯ ಸ್ವೀಕಾರ ಮಹೋತ್ಸವ ಸ್ವರ್ಣವಲ್ಲೀ ಮಠದ ಚರಿತ್ರೆಯಲ್ಲಿ ವಿಶಿಷ್ಟ, ವಿಶೇಷ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ವ ಸಿದ್ಧತೆ ಹಾಗೂ ನಂತರ ಎನ್ನುತ್ತ ಆರು ದಿನ ರಾತ್ರಿ-ಹಗಲು ಮಠದ ಆವಾರ ಜನರಿಂದ ತುಂಬಿತ್ತು. ರಾತ್ರಿಯೂ ಹಗಲಾಗಿತ್ತು.

ಶಿರಸಿ:

ತಾಲೂಕಿನ ಸ್ವರ್ಣವಲ್ಲೀ‌ ಮಠದಲ್ಲಿ ಐದು ದಿನ ನಡೆದ ಶಿಷ್ಯ ಸ್ವೀಕಾರ ಮಹೋತ್ಸವ ಸ್ವರ್ಣವಲ್ಲೀ ಮಠದ ಚರಿತ್ರೆಯಲ್ಲಿ ವಿಶಿಷ್ಟ, ವಿಶೇಷ ರೀತಿಯಲ್ಲಿ ದಾಖಲಾಯಿತು.5 ದಿನದ ಕಾರ್ಯಕ್ರಮದಲ್ಲಿ ೬೦ ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರು ಬಂದು ಹೋಗಿದ್ದು, ೪೫ ಸಾವಿರಕ್ಕೂ ಅಧಿಕ ಜನರು ಊಟೋಪಚಾರ ಸ್ವೀಕರಿಸಿ ದಾಖಲೆ ಸೃಷ್ಟಿಸಿದ್ದಾರೆ. ಮಠಗಳ ಮಹತ್ವ, ಅಧ್ಯಾತ್ಮ, ಧರ್ಮದ ಮೇಲಿನ ನಂಬಿಕೆಗಳನ್ನು ಭಕ್ತರೇ ಸಾಬೀತುಗೊಳಿಸಿದರು.ಪೂರ್ವ ಸಿದ್ಧತೆ ಹಾಗೂ ನಂತರ ಎನ್ನುತ್ತ ಆರು ದಿನ ರಾತ್ರಿ-ಹಗಲು ಮಠದ ಆವಾರ ಜನರಿಂದ ತುಂಬಿತ್ತು. ರಾತ್ರಿಯೂ ಹಗಲಾಗಿತ್ತು. ಕಾರ್ಯಕರ್ತರು, ಪ್ರಮುಖರು ಮರು‌ದಿನದ ಸಿದ್ಧತೆಗೆ ರಾತ್ರಿ ೨ ಗಂಟೆ ತನಕ ಕೆಲಸ ಮಾಡುತ್ತಿದ್ದರೆ ೨-೩ ಗಂಟೆಗೆ ಋತ್ವಿಜರು ಕೆಲ‌ ಸಮಯದ ವಿಶ್ರಾಂತಿಯಿಂದ ಎದ್ದು ಅನುಷ್ಠಾನದ ಸಿದ್ಧತೆಗೆ ಕೆಲಸ ಆರಂಭಿಸುತ್ತಿದ್ದರು. ಬೆಳಿಗ್ಗೆ ೮ ಗಂಟೆ ವೇಳೆಗೆ ಮಠಕ್ಕೆ ಭಕ್ತರು, ಸೇವಾಕರ್ತರು ಆಗಮಿಸಲು ಮುಂದಾಗಿದ್ದರು.ಐದೂ ದಿನ ೬೦೦ಕ್ಕೂ ಅಧಿಕ ಕಾರ್ಯಕರ್ತರು ಎಲ್ಲ ವಿಭಾಗದಲ್ಲಿ ನಿರಂತರ ಕಾರ್ಯ ಮಾಡಿದರೆ ಕೊನೆಯ ಎರಡು ದಿನ 3000ಕ್ಕೂ ಅಧಿಕ ಕಾರ್ಯಕರ್ತರು‌ ಬೆರಗು‌ ಮೂಡಿಸುವಂತೆ ಕೆಲಸ ಮಾಡಿದರು. ಎಲ್ಲೂ ಯಾವುದೇ ಲೋಪ ಆಗದಂತೆ ದುಡಿದರು. ಪಾರ್ಕಿಂಗ್, ಊಟೋಪಚಾರ, ಧಾರ್ಮಿಕ, ರಕ್ಷಣೆ,‌ ಮೂಲಭೂತ ಸೌಲಭ್ಯ, ವೇದಿಕೆ ಹೀಗೆ ಯಾವುದೇ ವಿಭಾಗದಲ್ಲೂ ಸಮಯ‌ ಪಾಲನೆ, ಅಚ್ಚುಕಟ್ಟು ತನ, ದೃಢವಾದ ವಿಶ್ವಾಸದ ಜತೆ ಸೇವಾ ಮನೋಭಾವನೆ ಇತ್ತು.ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿ ಅವರು ಶಿಷ್ಯ ಸ್ವೀಕಾರ ಕುರಿತು ಪ್ರಕಟಿಸಿದಾಗ ಫುಳಕದ ಭಾವ ಶಿಷ್ಯರಲ್ಲಿ ಬಂದಿತ್ತು. ಸ್ವತಃ ಗುರುಗಳೂ ನಮಗೆ‌ ಬ್ರಹ್ಮಾನಂದವಾಗಿದೆ ಎಂದಾಗ ಶಿಷ್ಯ ಸ್ವೀಕಾರ ಮಹೋತ್ಸವ ಶಿಷ್ಯ ಭಕ್ತರ ಉತ್ಸಾಹ ಹೆಚ್ಚಿಸಿತ್ತು. ಇದೇ‌ ಕಾರಣದಿಂದ ಗುರುಗಳು ಹೇಳಿದ ಸೂಚನೆಯನ್ನು ಆಜ್ಞೆಯಾಗಿಸಿಕೊಂಡರು. ಶಿರದ ಮೇಲಿಟ್ಟು ಹಗಳಿರುಳು ಕೆಲಸ ಮಾಡಿದರು. ನಿರಂತರ‌ ಜನ ಸಂಪರ್ಕದಲ್ಲಿ ಇರದ ಶಿಷ್ಯರು, ದೊಡ್ಡ ಕಾರ್ಯಕ್ರಮದಲ್ಲಿ ಕೆಲಸ ಮಾಡಿ ಅರಿವಿರದವರೂ ಇಲ್ಲಿ ಹೆಗಲಿಗೆ ಹೆಗಲಾದರು. ಗುರುಗಳ ಆನಂದಕ್ಕೆ ಧಕ್ಕೆಬಾರದು ಎಂದೇ ಕೆಲಸ ಮಾಡಿದರು. ಕೊನೆಗೂ ಗುರುವಿನ ಅನುಗ್ರಹ ಶಿಷ್ಯರ ನಂಬಿಕೆ ಎರಡೂ ಕೆಲಸ ಮಾಡಿತು.ಕೊನೆಯ ದಿ‌ನ‌ ಸೇರಿದ್ದ ೩೦ ಸಾವಿರಕ್ಕೂ ಅಧಿಕ ಭಕ್ತರಿಗೆ ಕೇವಲ ಮೂರು ತಾಸಿನಲ್ಲಿ ಊಟೋಪಚಾರ ಮುಗಿಸಿದ್ದೂ ದಾಖಲೆಗೆ ಕಾರಣವಾಯಿತು. ಮಠದ ಶಿಷ್ಯನೇ ಗುರುವಾಗುವ, ಮಠದ ಗುರುಗಳಿಗೆ ಪಟ್ಟದ ಶಿಷ್ಯರಾಗುವ ಕ್ಷಣವನ್ನು‌ ಕಣ್ತುಂಬಿಕೊಂಡರು. ಈ ಬಾರಿಯ ಸ್ವರ್ಣವಲ್ಲೀ ಮಠದ ವಿಶೇಷ ಎಂದರೆ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಯುವಕರೂ ನಿರಂತರ‌ ಸೇವಾ ಕರ್ತರಾಗಿ ಪಾಲ್ಗೊಂಡರು. ಮಕ್ಕಳಿಗೂ‌ ಸೇವಾ ಮನೋಭಾವನೆಯ ಪಾಠವೂ ಇಲ್ಲಿ‌ ಸದ್ದಿಲ್ಲದೇ ‌ನಡೆಯಿತು. ಒಂದೆಡೆಗೆ ಯತಿಗಳ, ವಿದ್ವಾಂಸರ, ನೂರಕ್ಕೂ ಅಧಿಕ ಋತ್ವಿಜರ ನಡುವೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅವರಿಗೆ ಸಹಕರಿಸುವ ಪರಿಚಾರಕರು, ಊಟೋಪಚಾರಕ್ಕೆ ಸಹಕರಿಸುವವರು ಹೀಗೆ ಎಲ್ಲ ವಿಭಾಗವೂ ಗಮನ ಸೆಳೆಯಿತು. ಶಿಷ್ಯ ಭಕ್ತರ ಸಾಂಪ್ರದಾಯಿಕ ಉಡುಪು ಧಾರಣೆ, ವಿನಯ ಹಾಗೂ ನಮ್ರತೆಯ ಸೇವೆ ಇಡೀ ಶಿಷ್ಯೋತ್ಸವದ ಯಶಸ್ಸಿನ ಪ್ರಭಾವ ಹೆಚ್ಚಿಸಿತು. ಶಿಷ್ಯ ಸ್ವೀಕಾರ ಮಹೋತ್ಸವದ ಮರುದಿ‌ನ ಶುಕ್ರವಾರವೂ ಅರವತ್ತಕ್ಕೂ ಅಧಿಕ ಕಾರ್ಯಕರ್ತರು ಮಠದಿಂದ ೬೦೦ ಮೀಟರ್ ದೂರದಲ್ಲಿ ಹಾಕಲಾದ ಊಟೋಪಚಾರ ವ್ಯವಸ್ಥೆ ಸಾಮಗ್ರಿ, ಮಠದ ಹೊರಗಿರುವ ವಸ್ತುಗಳನ್ನು ಪುನಃ ಸರಿಯಾಗಿ ಜೋಡಿಸುವ, ವಾಪಸ್ ಕೊಡುವ ವಸ್ತುಗಳನ್ನು ಪುನಃ ತಲುಪಿಸುವ ಕಾರ್ಯಗಳು ನಡೆದವು. ಗುರುಗಳ‌ ಸಂಕಲ್ಪದ ಶಕ್ತಿ ಶಿಷ್ಯರ ಮೂಲಕ ದರ್ಶನ ಮಾಡಿಸಿತು.