ಮಹಿಳೆಗೆ ಸಮಾನ ಹಕ್ಕು ಕಲ್ಪಿಸಿದ್ದ ಶಿವಶರಣರು

| Published : Mar 13 2024, 02:06 AM IST

ಸಾರಾಂಶ

ಮಹಿಳೆಯರನ್ನು ಸರಿಸಮಾನವಾಗಿ ಕಾಣಬೇಕು ಎಂಬ ನೀತಿಯು ಇಂದು ಅಥವಾ ನಿನ್ನೆಯದಲ್ಲ. 12ನೇ ಶತಮಾನದಲ್ಲಿಯೇ ಶರಣರು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದರು.

ಧಾರವಾಡ:

ನೀರು ಮತ್ತು ಮಹಿಳೆ ಪರಸ್ಪರ ಪೂರಕ ಅಂಶಗಳು. ನೀರನ್ನು ನಾವು ಯಾವ ಪಾತ್ರೆಯಲ್ಲಿ ಹಾಕಿದಾಗ ಅದರ ಗಾತ್ರ, ಅದರ ಆಕಾರ ಪಡೆದುಕೊಳ್ಳುವ ರೀತಿಯಲ್ಲಿಯೇ ಮಹಿಳೆಯರೂ ಸಹ ವಿವಾಹಕ್ಕೆ ಮೊದಲು ತಾವಿದ್ದ ಮನೆ, ವಿವಾಹವಾದ ನಂತರ ಗಂಡನ ಮನೆಯಲ್ಲಿ ಹೊಂದಿಕೊಂಡು ಬಾಳುತ್ತಾಳೆ ಎಂದು ವಿಶ್ರಾಂತ ಉಪನ್ಯಾಸಕಿ ಡಾ. ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.ಇಲ್ಲಿನ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯಲ್ಲಿ (ವಾಲ್ಮಿ) ಮಂಗಳವಾರ ಹಮ್ಮಿಕೊಳ್ಳಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಸಿಗೆ ನೀರುಣಿಸಿದ ಅವರು, ಮಹಿಳೆಯರನ್ನು ಸರಿಸಮಾನವಾಗಿ ಕಾಣಬೇಕು ಎಂಬ ನೀತಿಯು ಇಂದು ಅಥವಾ ನಿನ್ನೆಯದಲ್ಲ. 12ನೇ ಶತಮಾನದಲ್ಲಿಯೇ ಶರಣರು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದರು. ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ ಅವರು ಸಹ ಉತ್ತಮ ಕವಯಿತ್ರಿಗಳಾಗಿ ವಚನ ರಚಿಸುವ ಮಟ್ಟಿಗೆ ಅವರನ್ನು ಪ್ರಬುದ್ಧಗೊಳಿಸಿದ್ದನ್ನು ಶರಣರ ಕಾಲದಲ್ಲೇ ನಾವು ಕಾಣಬಹುದಾಗಿದೆ ಎಂದರು.ಮಹಿಳೆ ಎಂದರೆ ಸಹನೆ, ತಾಳ್ಮೆ, ಮಮತೆಯ ಪ್ರತೀಕ. ಗ್ರಾಮೀಣ ಮಹಿಳೆಯರ ಮೌಲ್ಯಗಳು ಇಂದಿಗೂ ನಮಗೆಲ್ಲ ಆದರ್ಶಪ್ರಾಯವಾಗಿದ್ದು ಅವಳ ತ್ಯಾಗ, ಕರುಣೆ, ಕಕ್ಕುಲಾತಿಗಳನ್ನು ನಾವು ಗೌರವಿಸಬೇಕಿದೆ. ಮಹಿಳೆ ಶಬ್ದದಲ್ಲಿ ಮಹಿ ಮತ್ತು ಇಳೆ ಎಂಬ ಎರಡು ಶಬ್ದಗಳಿದ್ದು ಎರಡೂ ಪದಗಳಿಗೆ ಭೂಮಿ ಎಂದೇ ಅರ್ಥ. ಅಂದರೆ ಮಹಿಳೆಯಲ್ಲಿ ಭೂಮಿಯ ಎರಡರಷ್ಟು ಸಹನಾಶಕ್ತಿ, ತಾಳ್ಮೆಗಳು ಇರುತ್ತವೆ ಎಂಬುದು ಇದರ ಅರ್ಥವಾಗಿದೆ ಎಂದು ಹೇಳಿದರು.ಬೆಳಗಾವಿ ಜಿಲ್ಲೆಯ ಪ್ರಗತಿಪರ ರೈತ ಮಹಿಳೆ ಪ್ರೇಮಾ ಶಂಕರ ಗಾಣಿಗೇರ, ತಮ್ಮ ಎಂಟು ಎಕರೆಯ ಜಮೀನಿನಲ್ಲಿ ಕೃಷಿಯಲ್ಲಿ ಸಾಧಿಸಿರುವ ಪ್ರಗತಿ ವಿವರಿಸಿದರು. ಕೇವಲ ಕೃಷಿಗೆ ಮಾತ್ರ ಅವಲಂಬಿತರಾಗದೇ ಹೈನುಗಾರಿಕೆ, ಪಶು ಸಂಗೋಪನೆ, ಸಾವಯವ ಕೃಷಿ, ಸಮಗ್ರ ಕೃಷಿ ಹೀಗೆ ಹಲವು ಪ್ರಕಾರಗಳನ್ನು ಅಳವಡಿಸಿಕೊಂಡಲ್ಲಿ ರೈತರು ಉತ್ತಮ ಸಾಧನೆ ಮಾಡಬಹುದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ಸಂಸ್ಥೆಯ ನಿರ್ದೇಶಕ ಪ್ರೊ. ಬಿ.ವೈ. ಬಂಡಿವಡ್ಡರ, ನೆಲ ಮತ್ತು ಜಲದ ಚಿಂತನೆ ಬೆಳೆಸಿದವರು ಅಮ್ಮಂದಿರೇ. ಈ ಸತ್ಯ ಅರಿತುಕೊಂಡು ಕೇವಲ ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರನ್ನು, ಅವರ ಕೊಡುಗೆ ನೆನೆಯದೇ ಸದಾ ಸ್ಮರಿಸಬೇಕೆಂದರು.

ಸಂಯೋಜಕಿ ಪ್ರೊ. ಸುವರ್ಣಾ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಡಾ. ಗುರುದೇವಿ ಹುಲ್ಲೆಪ್ಪನವರಮಠ ಹಾಗೂ ಮೂಡಲಗಿಯ ಪ್ರಗತಿಪರ ರೈತ ಮಹಿಳೆ ಪ್ರೇಮಾ ಗಾಣಿಗೇರ ಅವರನ್ನು ಸನ್ಮಾನಿಸಲಾಯಿತು. ಸುನಂದಾ ಸೀತೋಳೆ ಸ್ವಾಗತಿಸಿದರು. ನಾಗರತ್ನಾ ಹೊಸಮನಿ ನಿರೂಪಿಸಿದರು. ಅನುರಾಧಾ ಮಳಗಿ ವಂದಿಸಿದರು. ವಾಲ್ಮಿ ಸಹಾಯಕ ನಿರ್ದೇಶಕ ಪ್ರಭಾಕರ ಹಾದಿಮನಿ, ಸಮಾಲೋಚಕ ಡಾ. ವಿ.ಐ. ಬೆಣಗಿ ಇದ್ದರು.