ಲಿಂ.ಚನ್ನಬಸವ ಸ್ವಾಮೀಜಿಯವರ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮ ಡಿ.21 ರಂದು ಶ್ರೀಮಠದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಕಿರಿಯ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಹಿರಿಯ ಶ್ರೀಗಳು, ವಚನಶಿಲಾ ಮಂಟಪದ ನಿರ್ಮಾತೃ ಲಿಂ.ಚನ್ನಬಸವ ಸ್ವಾಮೀಜಿಯವರ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮ ಡಿ.21 ರಂದು ಶ್ರೀಮಠದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಕಿರಿಯ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಳವಾಗಿ ಬದುಕಿದ ಹಿರಿಯ ಶ್ರೀಗಳು ಸದಾ ಭಕ್ತರಿಗೆ ಗೌರವ ಸಲ್ಲಿಸುವ ಸ್ವಭಾವ ಹೊಂದಿದ್ದರು. ಅವರು ಶ್ರೀಮಂತ- ಬಡವ ಎಂಬ ಬೇಧಭಾವ ಎಂದಿಗೂ ಮಾಡುತ್ತಿರಲಿಲ್ಲ. ಎಲ್ಲ ಭಕ್ತರನ್ನು ಸಮಾನವಾಗಿ ಕಾಣುತ್ತಿದ್ದರು. ಇಂತಹ ಶ್ರೀಗಳನ್ನು ದೈಹಿಕವಾಗಿ ಕಳೆದುಕೊಂಡಿದ್ದು ನಮಗೆ, ಭಕ್ತರಿಗೆ ದುಃಖವಾಗಿದೆ. ಅವರು ದೈಹಿಕವಾಗಿ ಅಗಲಿದ್ದರೂ ಸಹ ಅವರು ಭಕ್ತರ ಮನಸ್ಸಿನಲ್ಲಿ ಸದಾ ಇರುತ್ತಾರೆ. ಡಿ.21 ರಂದು ನಡೆಯಲಿರುವ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮಕ್ಕೆ ಅನೇಕ ಶ್ರೀಗಳು, ಸಚಿವರು, ಶಾಸಕರು, ಗಣ್ಯರು ಸೇರಿದಂತೆ ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಅಂದು ಆಗಮಿಸುವ ಸಕಲ ಭಕ್ತರಿಗೂ ಮಹಾಪ್ರಸಾದ ವ್ಯವಸ್ಥೆ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜ್ಯರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದರು.

ಡಿ.12ರಂದು ನಡೆದ ಶ್ರೀಗಳ ಅಂತಿಮ ಧಾರ್ಮಿಕ ವಿಧಿವಿಧಾನ ಕ್ರಿಯೆಯಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಶ್ರೀಗಳು, ಸಚಿವರು, ಶಾಸಕರು ಸೇರಿದಂತೆ ಅಪಾರ ಭಕ್ತಸಮೂಹ ಭಾಗವಹಿಸಿ ಹಿರಿಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ್ದರು. ವಚನ ಶಿಲಾ ಮಂಟಪದ ಮಧ್ಯ ಭಾಗದಲ್ಲಿ ನಿರ್ಮಿಸಿದ ಗದ್ದುಗೆಯಲ್ಲಿ ಶ್ರೀಗಳ ಅಂತಿಮ ಕ್ರಿಯೆಯನ್ನು ನಿಡಸೋಸಿಯ ಜಗದ್ಗುರು, ಹುಬ್ಬಳ್ಳಿಯ ಜಗದ್ಗುರು, ಚಿತ್ರದುರ್ಗದ ಶರಣರು ಸೇರಿದಂತೆ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಸಲಾಗಿದೆ. ರಾಯಚೂರು ಭಕ್ತರು ಈಗಾಗಲೇ ಗದ್ದುಗೆಯ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ ಎಂದರು.

94 ವರ್ಷ ತುಂಬಿದ ಶ್ರೀಗಳು ವಯೋಸಹಜವಾಗಿ ಅಸ್ತವ್ಯಸ್ಥವಾಗಿದ್ದರು. ಈಚೆಗೆ ಆರೋಗ್ಯ ಸುಧಾರಣೆಯಾದ ಹಿನ್ನೆಲೆಯಲ್ಲಿ ನಾನು ನಮ್ಮ ಇನ್ನೊಂದು ಮಠಕ್ಕೆ ತೆರಳಿದ್ದೆ. ಶ್ರೀಮಠದ ಸಿದ್ದಲಿಂಗನಿಗೆ ಶ್ರೀಗಳು ನಾನು ಬಹಳ ಅಸ್ತವ್ಯಸ್ಥರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬಾರದು. ನನ್ನ ಪ್ರಾಣವನ್ನು ಹಾದಿಯಲ್ಲಿ ಬಿಡಸಬಾರದು. ಶ್ರೀಮಠದಲ್ಲಿ ನಾನು ಇಹಲೋಕ ತ್ಯಜಿಸುವೆ ಎಂದು ಹೇಳಿದ್ದನ್ನು ಸ್ಮರಿಸಿದರು. ಡಿ.11 ರಂದು ಬೆಳಗ್ಗೆ ಏಳು ಗಂಟೆಗೆ ಆಗಮಿಸಿದ್ದ ವೈದ್ಯರು ಶ್ರೀಗಳು ಇಹಲೋಹ ತ್ಯಜಿಸಿದ ಸಂಗತಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಬೊಮ್ಮನಹಳ್ಳಿ, ಸುಭಾಸ ಸಿಂದಗಿ, ಭೀಮರಾಯ ಬೈಚಬಾಳ, ಜಗದೀಶ ಬೇವೂರ, ಪ್ರಭು ಬಾಗೇವಾಡಿ, ಈರಪ್ಪ ಬಸರಕೋಡ, ಶಾಂತು ಬೋರಗಿ, ವಿವೇಕಾನಂದ ಕಲ್ಯಾಣಶೆಟ್ಟಿ ಇತರರು ಇದ್ದರು.