ಕಣ್ಮನ ತಣಿಸಿದ ಶಿವಲಿಂಗನ ಅಲಂಕಾರ, ಇದನ್ನು ಕಣ್ತುಂಬಿಕೊಳ್ಳಲು ಬಂದ ಜನಸಾಗರ, ಎಲ್ಲೆಲ್ಲಿಯೂ ಭಕ್ತಾದಿಗಳ ಹರ್ಷೋಧ್ಗಾರ, ದೇವರ ದರ್ಶನ ಪಡೆದು ಧನ್ಯತೆ ಮೆರದ ಭಕ್ತ ಸಮೂಹ. ಇದು ಶಿವರಾತ್ರಿ ಹಬ್ಬದ ಪ್ರಯುಕ್ತ ಕೆ.ಎಂ.ದೊಡ್ಡಿಯ ವಿವಿಧೆಡೆ ದೇವಸ್ಥಾನಗಳಲ್ಲಿ ಕಂಡುಬಂದ ದೃಶ್ಯಾವಳಿಗಳು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಣ್ಮನ ತಣಿಸಿದ ಶಿವಲಿಂಗನ ಅಲಂಕಾರ, ಇದನ್ನು ಕಣ್ತುಂಬಿಕೊಳ್ಳಲು ಬಂದ ಜನಸಾಗರ, ಎಲ್ಲೆಲ್ಲಿಯೂ ಭಕ್ತಾದಿಗಳ ಹರ್ಷೋಧ್ಗಾರ, ದೇವರ ದರ್ಶನ ಪಡೆದು ಧನ್ಯತೆ ಮೆರದ ಭಕ್ತ ಸಮೂಹ. ಇದು ಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧೆಡೆ ದೇವಸ್ಥಾನಗಳಲ್ಲಿ ಕಂಡುಬಂದ ದೃಶ್ಯಾವಳಿಗಳು.

ಶಿವ ಒಬ್ಬನೆಯಾದರೂ ನಾಮ ಹಲವು ಎಂಬಂತೆ ಶಿವನ ವಿವಿಧ ರೂಪಗಳಲ್ಲಿ ಉದ್ಬವಿಸಿರುವ ಸಮೀಪದ ಹನುಮಂತನಗರ ಶ್ರೀ ಆತ್ಮಲಿಂಗೇಶ್ವರ, ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ, ಕಾರ್ಕಹಳ್ಳಿ ಶ್ರೀ ಬಸವೇಶ್ವರ, ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಅಣ್ಣೂರು ಶ್ರೀ ಬೊಮ್ಮಲಿಂಗೇಶ್ವರ, ಮಠದದೊಡ್ಡಿಯ ಶ್ರೀ ಹರಿಹರೇಶ್ವರ, ಮಠದಹೊನ್ನಾಯಕನಹಳ್ಳಿ ಮಂಟೇಸ್ವಾಮಿ, ಆಲಭುಜನಹಳ್ಳಿ ಶ್ರೀ ನಾಗಲಿಂಗೇಶ್ವರ, ಕೆ.ಶೆಟ್ಟಹಳ್ಳಿ ಶ್ರೀ ಬೊಮ್ಮಲಿಂಗೇಶ್ವರ, ಅರುವನಹಳ್ಳಿ ಶ್ರೀ ಬಿರೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.

ಮಹಾ ಶಿವರಾತ್ರಿ ಅಂಗವಾಗಿ ಶ್ರೀ ಆತ್ಮಲಿಂಗೇಶ್ವರ ದೇವಾಲದಲ್ಲಿ ವಿಶೇಷ ಪೂಜಾ ಕೈಂಕಾರ್ಯಗಳು ಸೇರಿದಂತೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಿದವು.

ಮಹಾರುದ್ರ ಹೋಮ:

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಫೆ.೧೪ ರಂದು ಗಣಪತಿ ಹೋಮ ವಿಧಿ ವಿಧಾನಗಳಿಂದ ನಡೆದರೆ ಫೆ.೧೫ ರಂದು ಶಿವರಾತ್ರಿ ಅಂಗವಾಗಿ ಮಹಾರುದ್ರ ಹೋಮ ಜರುಗಿತು.

ಈ ವೇಳೆ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ಎಜುಕೇಷನ್ ಟ್ರಸ್ಟ್ನ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ನೇತೃತ್ವದಲ್ಲಿ ರುದ್ರಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು.

ಹನುಮಂತನಗರದಲ್ಲಿ ಜಾಗರಣೆ ಜಾತ್ರೆ:

ಮಹಾಶಿವರಾತ್ರಿಯ ಅಂಗವಾಗಿ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದಲ್ಲಿ ಜಾಗರಣೆ ಜಾತ್ರೆ ಜರುಗಿದವು.ಜಾತ್ರೆಯ ಹಿನ್ನಲೆಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಬೆಳಗ್ಗೆ ಗಣಪತಿ ಪೂಜೆ, ಸ್ವಾಮಿಗೆ ಪಂಚಾಮೃತಾಭಿಷೇಕ ಮತ್ತು ಪೂಜಾ ಅಲಂಕಾರಗಳು, ರುದ್ರಹೋಮ, ಮಹಾಮಂಗಳಾರತಿ ನಂತರ ಸಂಜೆಯಿಂದ ಬೆಳಗಿನ ಜಾವದವರೆಗೆ ಪೂಜಾ ಕಾರ್ಯಕ್ರಮಗಳ ಜರುಗಿದವು.