ಕನ್ನಡಪ್ರಭ ವಾರ್ತೆ ಬೆಂಗಳೂರು:

ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸುತ್ತಿರುವುದಕ್ಕೆ ಸಮಾಧಾನವಿದೆ. ಸರ್ಕಾರವು ಪಕ್ಷದ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಜತೆಗಿರಲಿದ್ದು, 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮತ್ತು 2029ರಂದು ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿ.ಕೆ.ಹರಿಪ್ರಸಾದ್‌ ಅವರ ಕೆಪಿಸಿಸಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಕಳೆದ ಆರು ವರ್ಷಗಳ ಕಾಲ ಪಕ್ಷದ ಅಧ್ಯಕ್ಷನಾಗಿ ಹಲವು ಒಳ್ಳೆಯ ಕೆಲಸ ಮಾಡಿದ್ದೇನೆ ಹಾಗೂ ನನ್ನಿಂದಲೂ ಕೆಲ ತಪ್ಪಾಗಿದೆ. ಆದರೆ, ನನ್ನ ಕೈಲಾದಷ್ಟು ಕಾರ್ಯಕರ್ತರ ಸೇವೆ ಮಾಡಿದ್ದೇನೆ. ನಾವು ವಿರೋಧ ಪಕ್ಷದಲ್ಲಿದ್ದಾಗ, ನಾನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೇವೆ ಎಂದರು.

ನಾನು ಮತ್ತು ಹರಿಪ್ರಸಾದ್‌ ಒಂದೇ ಸಮಯದಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದವರು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರಿಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸುತ್ತಿರುವುದು ಸಮಾಧಾನ ತಂದಿದೆ. ಸರ್ಕಾರ ಮತ್ತು ಪಕ್ಷ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಜತೆಗಿರಲಿದೆ. ನಾನು ಮುಖ್ಯಮಂತ್ರಿಯಾಗಿದ್ದರೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 2028ರಲ್ಲಿ ಕಾಂಗ್ರೆಸನ್ನು ಮತ್ತೆ ಅಧಿಕಾರಕ್ಕೆ ತಂದು 2029ರಲ್ಲಿ ರಾಹುಲ್‌ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲ ಸಂಕಲ್ಪ ಮಾಡಬೇಕು. ಅದಕ್ಕೆ ಬೇಕಾಗುವ ಎಲ್ಲ ನೆರವನ್ನೂ ನಾವು ಪಕ್ಷದ ಅಧ್ಯಕ್ಷರಿಗೆ ನೀಡಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ಸಂಘಗಳ ಚುನಾವಣೆ:


ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸಚಿವ ಸಂಪುಟದಲ್ಲಿ ಈಗಾಗಲೇ ತೀರ್ಮಾನಿಸಲಾಗಿದೆ. ಆ ಮೂಲಕ ಪಂಚಾಯತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕರನ್ನು ತಯಾರು ಮಾಡುವ ಗುರಿ ಹೊಂದಲಾಗಿದೆ. ಇದೇ ವರ್ಷದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲಾಗುವುದು. ಹಾಗೆಯೇ, ವಿದ್ಯಾರ್ಥಿ ಘಟಕ, ಮಹಿಳಾ ಘಟಕ ಹೆಚ್ಚಿನ ಸಂಘಟನೆ ಮಾಡಬೇಕು. ಮಹಿಳೆಯರಿಗೆ ಮೀಸಲಾತಿ ಈಡಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಘೋಷಿಸಿದರು.

ಅಧ್ಯಕ್ಷರಾಗಿ ಸಲ್ಲಿಸಿದಸೇವೆಯ ಮೆಲುಕು:

ಸೋನಿಯಾ ಗಾಂಧಿ ಮತ್ತು ಪಕ್ಷದ ವರಿಷ್ಠರು 2020ರ ಮಾ.10ರಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರು. ಆಗಿನಿಂದಲೂ ಶಕ್ತಿ ಮೀರಿ ಕಾರ್ಯಕರ್ತರ ಸೇವೆ ಮತ್ತು ಪಕ್ಷ ಸಂಘಟನೆ ಮಾಡಿದ್ದೇನೆ. ಕೋವಿಡ್‌ ಅವಧಿಯಲ್ಲಿ ಜನ ತಮ್ಮ ಊರುಗಳಿಗೆ ಹೋಗಲು ಬಸ್‌ಗಳಿಗೆ ₹1 ಕೋಟಿ ಪಾವತಿಸಲಾಗಿದೆ. ಲಕ್ಷಾಂತರ ಜನರಿಗೆ ಆಹಾರ ಕಿಟ್‌ ವಿತರಿಸಿದೆವು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ಖರೀದಿ ಮಾಡಿ, ಬಡವರಿಗೆ ಹಂಚಿದೆವು. ಚಾಮರಾಜನಗರ ಆಕ್ಸಿಜನ್‌ ದುರಂತದಲ್ಲಿ ಪ್ರಾಣಬಿಟ್ಟವರ ಕುಟುಂಬದವರಿಗೆ ಮಾತು ಕೊಟ್ಟಂತೆ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.ಹರಿ ಹೋರಾಟಕ್ಕೆ ಕೈ ಜೋಡಿಸಿ:

ಕೋಮುವಾದಿ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಹೋರಾಟ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಕೆ.ಹರಿಪ್ರಸಾದ್‌ ಅವರೊಂದಿಗೆ ಪಕ್ಷದ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅರಮನೆ ಮೈದಾನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಹರಿಪ್ರಸಾದ್‌ ಅವರು ಕೋಮುವಾದಿ ಬಿಜೆಪಿ, ಆರೆಸ್ಸೆಸ್‌ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದವರು. ಐದು ದಶಕದಿಂದ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್‌ನಲ್ಲಿ ದುಡಿದಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಸಿಕ್ಕಿರುವುದು ಸ್ವಾಗತಾರ್ಹ. ಅವರು ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಸಂಘಟಿಸುವ ವಿಶ್ವಾಸವಿದೆ ಎಂದರು.ನಾನು ಈ ರಾಜ್ಯದ ವಿರೋಧ ಪಕ್ಷದ ನಾಯಕನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟಿರುವಂತಹ ಭರವಸೆಗಳನ್ನು ಈಡೇರಿಸುವಂತಹ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಮತ್ತು ಸ್ಥಳೀಯ ನಾಯಕರಾದ ನಾವೆಲ್ಲಾ ತೀರ್ಮಾನ ಮಾಡಿದ್ದಂತಹ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ ₹1 ಲಕ್ಷದ 40 ಸಾವಿರಕ್ಕೂ ಹೆಚ್ಚೂ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ನನ್ನ ಪ್ರಯತ್ನಗಳಿಗೆ ಡಿ.ಕೆ.ಶಿವಕುಮಾರ್‌ ಅವರು ಕೂಡ ಅಧ್ಯಕ್ಷರಾಗಿ ಹೆಗಲಿಗೆ ಹೆಗಲುಕೊಟ್ಟು ದುಡಿದಿದ್ದಾರೆ. ನಾವು ಅನೇಕ ಹೋರಾಟಗಳನ್ನು ಮಾಡಿ ಪಕ್ಷ ಸಂಘಟನೆ ಮಾಡಿ 2023ರಲ್ಲಿ ಶಿವಕುಮಾರ್‌ ಅವರು ಅಧ್ಯಕ್ಷರಾಗಿ, ನಾನು ವಿರೋಧ ಪಕ್ಷದ ನಾಯಕನಾಗಿ 136 ಸ್ಥಾನವನ್ನು ಗೆದ್ದಿದ್ದೆವು. ಇದು ಬರೀ ನಮ್ಮಿಬ್ಬರ ಗೆಲುವಲ್ಲ, ಬದಲಿಗೆ ನಿಮ್ಮೆಲ್ಲರ ಪ್ರಯತ್ನದಿಂದ, ಇಲ್ಲಿ ಆಸೀನರಾಗಿರುವ ನಾಯಕರು, ಕಾರ್ಯಕರ್ತ ಬಂಧುಗಳಿಂದ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.ಹರಿಪ್ರಸಾದ್‌ ಅವರು ಕೆಳಹಂತದಿಂದ ಬಂದಿರುವವರು. ಸಾಮಾನ್ಯ ಕುಟುಂಬದಿಂದ ಬಂದಿರುವವರು. ಸಾಮಾನ್ಯ ಕಾರ್ಯಕರ್ತರಾಗಿ ಸುಮಾರು 1972 ಇಸವಿಯಲ್ಲಿ ಬಂದು ಇಲ್ಲಿಯವರೆಗೆ ಸುಮಾರು 5 ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ. ಅವರು ವಿದ್ಯಾರ್ಥಿ ನಾಯಕನಾಗಿ, ಯುವ ಕಾಂಗ್ರೆಸ್‌ನ ನಾಯಕನಾಗಿ ಅನೇಕ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು, ಸೇವಾದಳದ ಅಧ್ಯಕ್ಷನಾಗಿ ಸೇವೆ ಮಾಡಿದ್ದಾರೆ. ಅಂತವರು ಇಂದು ಬಹಳ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರ ನಿಷ್ಠೆ, ಸಿದ್ಧಾಂತಕ್ಕೆ ಬದ್ಧತೆ, ಕಾಂಗ್ರೆಸ್‌ ಕಾರ್ಯಕರ್ತನಾಗಿ ಅನೇಕ ಸ್ಥಾನಗಳಲ್ಲಿ ಕೆಲಸ ಮಾಡಿದ ಪರಿಣಾಮವಾಗಿ ಇವತ್ತು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವರಿಗೆ ಈ ನಿಟ್ಟಿನಲ್ಲಿ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹುನ್ನಾರ:

ಬಿಜೆಪಿಯವರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು. ಭಾರತ ಅನೇಕ ಜಾತಿ, ಧರ್ಮ, ಸಂಸ್ಕೃತಿಯಿಂದ ಕೂಡಿರುವ ಬಹುತ್ವದ ರಾಷ್ಟ್ರ, ಹಾಗೇ ಉಳಿಯಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು. ಭಾರತ ದೇಶ ಅನೇಕ ಜಾತಿ-ಧರ್ಮ, ಸಂಸ್ಕೃತಿಯಿಂದ ಕೂಡಿದೆ. ಈ ದೇಶದಲ್ಲಿ ನಾವು ಬಹುತ್ವವನ್ನು ಕಾಪಾಡುವುದು, ಗೌರವ ಕೊಡುವುದು ಅತ್ಯಂತ ಅವಶ್ಯ. ಭಾರತೀಯ ಜನತಾ ಪಕ್ಷದವರು ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನ ವಿಫಲಗೊಳಿಸಿದಾಗ ಮಾತ್ರ ನಾವು ಈ ದೇಶವನ್ನು ಉಳಿಸಲು, ಸಂವಿಧಾನ ಉಳಿಸಲು ಸಾಧ್ಯ. ಇಲ್ಲದೇ ಹೋದರೆ ಬಿಜೆಪಿಗರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳುಗಳನ್ನು ಹರಡಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಾರೆ.