ತರಳಿ ಮಠದಲ್ಲಿ ಶಿವ ಮಂದಿರ ಲೋಕಾರ್ಪಣೆ

| Published : Feb 27 2025, 12:32 AM IST

ಸಾರಾಂಶ

ಶಿವ ಮಂದಿರದ ಲೋಕಾರ್ಪಣೆ ಹಾಗೂ ಧರ್ಮಸಭೆ ವಿಜೃಂಭಣೆಯಿಂದ ಜರುಗಿತು.

ಸಿದ್ದಾಪುರ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಸಂಸ್ಥಾನ ತರಳಿಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಶಿವ ಮಂದಿರದ ಲೋಕಾರ್ಪಣೆ ಹಾಗೂ ಧರ್ಮಸಭೆ ವಿಜೃಂಭಣೆಯಿಂದ ಜರುಗಿತು.

ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಸಾರಂಗನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮೀಜಿ ಮಾತನಾಡಿ, ಸಂಬಂಧಗಳನ್ನು ಬೆಸೆಯುವ ಮೂಲಕ ಗಟ್ಟಿಗೊಳಿಸುವ ವೇದಿಕೆ ಮಠ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳದಲ್ಲಿ ಮಠ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ವರ್ಷ ರಾಜ್ಯದ ನಾಲ್ಕು ಕಡೆ ಮಠಗಳ ಲೋಕಾರ್ಪಣೆ ಮಾಡಲಿದ್ದೇವೆ. ಎಲ್ಲರೂ ಒಂದಾಗಿ ಎದೆಗುಂದದೇ ಸಮಾಜವನ್ನು ಮುನ್ನಡೆಸೋಣ ಎಂದರು.

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ ಮಾತನಾಡಿ, ಸಮಾಜದ ಮೂಲ ಮಠವಾದ ತರಳಿಮಠವನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಠದ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಬೇಕಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಮೂಢನಂಬಿಕೆಗಳಿಂದ ಸಮಾಜದವರು ದೂರವಾಗಬೇಕು. ಈ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆ ಬೇಕಾಗಿದೆ. ಮಠದ ಜೀರ್ಣೋದ್ಧಾರದಲ್ಲಿ ಎಲ್ಲರೂ ಕೈಲಾದ ಸೇವೆ ಸಲ್ಲಿಸಬೇಕು. ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಠ ಮುನ್ನಡೆಸಬೇಕು. ಸರ್ಕಾರದ ಅನುದಾನವನ್ನು ಮಠಕ್ಕೆ ಶಕ್ತಿಮೀರಿ ನೀಡುತ್ತೇನೆ ಎಂದರು.

ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರ ಮಾತನಾಡಿ, ಗುರುಪೀಠಗಳ ಮೂಲಕ ಸಮಾಜವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಸಮಾಜದ ಸಂಘಟನೆಯಲ್ಲಿ ಭಾಗಿಯಾದರೆ ಮಾತ್ರ ನಾವುಗಳು ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದರು.

ಬೆಂಗಳೂರು ನಾರಾಯಣಗುರು ವಕೀಲರ ಸಂಘದ ಅಧ್ಯಕ್ಷ ಎ.ಕೆ. ವಸಂತ, ಹಿರಿಯ ವಕೀಲ ಜಿ.ಟಿ.ನಾಯ್ಕ ಮಣಕಿನಗೊಳಿ, ಕೆಸಿಡಿಸಿ ಬೆಂಗಳೂರಿನ ಮಾಜಿ ಉಪಾಧ್ಯಕ್ಷ ಹೆಚ್.ಆರ್.ಸತೀಶ ಮಾತನಾಡಿದರು.

ಸಂಸ್ಥಾನ ತರಳಿಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಎನ್.ಡಿ.ನಾಯ್ಕ ಸ್ವಾಗತಿಸಿದರು. ಪ್ರೊ. ಎಂ.ಕೆ.ನಾಯ್ಕ ಹೊಸಳ್ಳಿ, ಲತಿಕಾ ನಾಯ್ಕ ಹಾಗೂ ಭಾವನಾ ನಾಯ್ಕ ನಿರೂಪಿಸಿದರು. ಮಠದ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಎಚ್.ನಾಯ್ಕ ವಂದಿಸಿದರು.

ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ತರಳಿಮಠದಲ್ಲಿ ನಡೆದ ಧರ್ಮಸಭೆಯಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಮಠದ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.