ಮಹಾಶಿವರಾತ್ರಿ ಅಂಗವಾಗಿ ಬಸವಕೇಂದ್ರ ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಹಜ ಶಿವಯೋಗದಲ್ಲಿ ನೂರಾರು ಬಸವಾನುಯಾಯಿಗಳು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇಷ್ಟಲಿಂಗದ ಮೂಲಕ ಶಿವಯೋಗವನ್ನು ಮಾಡುತ್ತ ಹೋದರೆ ಮಾನವನೇ ಮಹದೇವನಾಗುವ ತತ್ವ ಸಾಕಾರಗೊಳ್ಳುತ್ತದೆ ಎಂದು ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ಮಹಾಶಿವರಾತ್ರಿ ಅಂಗವಾಗಿ ಬಸವಕೇಂದ್ರ ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವ ಅಂದರೆ ಹುಲಿ ಚರ್ಮ ಹೊದ್ದ, ಮೈಮೇಲೆ ವಿಭೂತಿ ಬಳಿದಿರುವ ನಾಲ್ಕು ಕೈಗಳ ಕಿರೀಟಧಾರಿ, ಕೊರಳಲ್ಲಿ ಹಾವು, ರುದ್ರಾಕ್ಷಿ, ತಲೆಯಲ್ಲಿ ಚಂದ್ರಧಾರಿ, ಢಮರುಗ, ಆತ ಕೈಲಾಸ ವಾಸಿ ಎಂದು ತಿಳಿದಿದ್ದೇವೆ. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಶಿವನ ಕಲ್ಪನೆ ಎಂದರೆ ಸರ್ವರಿಗೂ ಒಳಿತನ್ನು ಬಯಸುವವ ಎಂದರು.

ಮನುಷ್ಯ ತಂತ್ರಜ್ಞಾನದ ಮೂಲಕ ತನ್ನಲ್ಲಿನ ಅರಿವನ್ನು ಜಾಗೃತಗೊಳಿಸಿಕೊಂಡು ಅನೇಕ ವಿಧವಾದ ಸಂಶೋಧನೆ ಮಾಡಿ ಹೊಸ ಹೊಸ ಮಾದರಿಗಳನ್ನು ಕಂಡುಹಿಡಿದರು. ಇದೆಲ್ಲವೂ ಭೌತಿಕ ಅಥವಾ ಬಾಹ್ಯಕ್ಕೋಸ್ಕರ. ಆದರೆ ಅಂತರಂಗದ ಅರಿವನ್ನು ಜಾಗೃತಗೊಳಿಸಲು ಏನು ಮಾಡಿದ ಎನ್ನುವುದಕ್ಕೆ ಶೂನ್ಯ ಉತ್ತರವಿದೆ. ವಿಜ್ಞಾನಿಗಳು ಹೊಸ ಆವಿಷ್ಕಾರಗಳತ್ತ ಮುಖ ಮಾಡಿ ಹಲವು ಉಪಕರಣಗಳನ್ನು ಕಂಡುಹಿಡಿದರೆ, ದಾರ್ಶನಿಕರು ಇದರ ಹೊರತಾಗಿ ತಮ್ಮ ದಿವ್ಯ ಕರ್ತೃತ್ವ ಶಕ್ತಿಯಿಂದ, ತ್ಯಾಗಭಾವದಿಂದ ಮನುಷ್ಯರ ಅಂತರಂಗದ ನೆಮ್ಮದಿಯ ಹಲವು ವಿಚಾರಗಳನ್ನು ಬಿತ್ತಿದರು ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ದೇವಾಲಯ ಸಂಸ್ಕೃತಿಗೆ ಬದಲಾಗಿ ಇಷ್ಟಲಿಂಗವನ್ನು ಸಂಶೋಧಿಸಿ ಕೊಟ್ಟರು. ಅದರ ಮೂಲಕ ನಮಗೆ ನಾವೇ ದೇವರಾಗುವ ತತ್ವವನ್ನು ನಿರೂಪಿಸಿದರು. ಇಷ್ಟಲಿಂಗ ಜಗದ ಕುರುಹು. ಇದರಲ್ಲಿ ಎಲ್ಲವೂ ಅಡಗಿದೆ. ಅದರಿಂದ ಎಲ್ಲವೂ ಸಾಧ್ಯವಿದೆ. ನಮ್ಮಲ್ಲಿ ದೇವಾಲಯ ಸಂಸ್ಕೃತಿ ದಿನೇದಿನೇ ಹೆಚ್ಚುತ್ತಿದೆ. ಅಲ್ಲಿ ಭಿನ್ನ ಭೇದವಿದೆ. ಕೆಲವರಿಗೆ ಪ್ರವೇಶವಿದೆ ಮತ್ತೆ ಕೆಲವರಿಗೆ ನಿಷಿದ್ಧವಿದೆ. ಅದಕ್ಕಾಗಿ ಇಂತಹ ಅಸಮಾನತೆ ತೋರುವ ಗುಡಿ ಗುಂಡಾರಗಳಿಗೆ ಅಲೆದಾಡಿ ಸುಸ್ತಾಗದಿರಿ. ಸದ್ಭಾವದಿಂದ ನಿಮ್ಮ ದೇವರನ್ನು ನೀವೇ ನಿಮ್ಮ ಕರದಲ್ಲಿಟ್ಟು ಪೂಜಿಸುವುದ ರೂಢಿಸಿಕೊಳ್ಳಿ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಶಿವಯೋಗವು ನಮ್ಮ ಜೀವನದಲ್ಲಿ ಸೋಲನ್ನು ನೋಡದೇ ಇರುವ ಸಾಧನವಾಗಿದೆ.ಈ ಕೆಲಸವನ್ನು ಶಿವಯೋಗಿ ಪರಂಪರೆಯ ಸಿದ್ಧರಾಮರು, ಯಡಿಯೂರು ಸಿದ್ಧಲಿಂಗರು, ಅಥಣಿ ಮುರುಘೇಂದ್ರ ಶಿವಯೋಗಿಗಳು ಇತ್ತೀಚಿನ ಕೆಲ ಸತ್ಪುರುಷರು ಮಾಡಿದ್ದಾರೆ. ಅವರು ಸುಪ್ರಭಾತ ಸಮಯದಲ್ಲಿ ಅಲ್ಲದೆ ಇಷ್ಟಲಿಂಗದ ಮೂಲಕ ಶಿವಯೋಗ ಸಾಧನೆಯನ್ನು ತ್ರಿಕಾಲ ಸಹಿತ ಮಾಡುತ್ತ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ತಮ್ಮ ತ್ಯಾಗಭಾವದಿಂದ ಜಗವನ್ನು ಪಾವನ ಮಾಡಲು ಶ್ರಮಿಸಿದರು ಎಂದರು.

ಬಹಳಷ್ಟು ಜನರು ನಾವು ಏನನ್ನು ಗಳಿಸಿಕೊಳ್ಳಬೇಕು ಪಡೆದುಕೊಳ್ಳಬೇಕು ಅನ್ನುವುದು ಶಿವಯೋಗದಿಂದ ಸಾಧ್ಯ ಎನ್ನುವುದನ್ನು ಮರೆತಂತಿದೆ. ಈ ಜಗತ್ತನ್ನು ಎತ್ತರಿಸುವ ನಾವು ಗೌರವಪೂರ್ವಕ ಸಮಭಾವ ನೆಮ್ಮದಿಯಿಂದ ಬದುಕುವ ಶಿವಯೋಗ ಬಿಡಬಾರದು. ಈ ಶಿವರಾತ್ರಿಯಂದು ಪರಂಪರೆಯಂತೆ ನಮ್ಮ ಬಸವಪ್ರಭು ಸ್ವಾಮೀಜಿ ಅರ್ಥಪೂರ್ಣವಾಗಿ ಶಿವಯೋಗ ನಡೆಸಿಕೊಟ್ಟಿದ್ದಾರೆ ಎಂದರು.

ವಿವಿಧ ಸಮಾಜ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಎಸ್.ಷಣ್ಮುಖಪ್ಪ, ಜೆ.ಎಸ್.ಮುರುಘೇಶ್, ನಾಗರಾಜ ಸಂಗಂ, ಚಂದ್ರಣ್ಣ, ತಿಮ್ಮಾರೆಡ್ಡಿ, ಎಸ್.ಎಂ. ಕೊಟ್ರೇಶಪ್ಪ, ಶಿಕ್ಷಕ ಗೊಂಚಿಗಾರ್, ಎಸ್.ವಿ.ಹರ್ತಿ, ಗೀತಾ ರುದ್ರೇಶ್, ಶೈಲಜಾಬಾಬು, ರಾಜಶೇಖರ್, ಜಾಗತಿಕ ಲಿಂಗಾಯತ ಸಭಾದ ಕಡೂರು ಕುಮಾರಸ್ವಾಮಿ, ಮಲ್ಲೇಶ್ ಸೇರಿದಂತೆ ಎಸ್ ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲನೌಕರರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಲಾವಿದೆ ಗಿರಿಜಾಹಿರೇಮಠ ಅವರು ಪ್ರಾರ್ಥನೆ ಹಾಗೂ ಶಿವಯೋಗದ ಗೀತೆಗಳನ್ನು ಹಾಡಿದರು.