ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನಕ್ಕೆ ಪ್ರತೀಕರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಶಾ ಭಾಂಡಗೆ ಹೇಳಿದರು.ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಶಿವಾಜಿ ಮಹಾರಾಜ ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ತಾಯಿ ಜೀಜಾಬಾಯಿ ನೀಡಿದ ಶಿಕ್ಷಣ, ಬೆಳದ ವಾತಾವರಣ, ಜೀವನಾನುಭವ ಶಿವಾಜಿಗೆ ಪ್ರೇರಣೆ ನೀಡಿತ್ತು ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಮಹಾತ್ಮರ ಜಯಂತಿಗಳನ್ನು ಕೇವಲ ಆಚರಿಸಿದರೆ ಸಾಲದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅಂದಾಗ ಮಾತ್ರ ಮಹಾತ್ಮರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದರು.ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ರಾಜನಲ್ಲ, ಸ್ವರಾಜ್ಯದ ಕನಸು ಸಾಕಾರಗೊಳಿಸಿದ ಮಹಾನ್ ನಾಯಕ. ಅನೇಕ ಕೋಟೆ ವಶಪಡಿಸಿಕೊಳ್ಳುವ ಮೂಲಕ ಶಕ್ತಿಶಾಲಿ ಆಡಳಿತ ವ್ಯವಸ್ಥೆ ರೂಪಿಸಿದವರು. ಗೆರಿಲ್ಲಾ ಯುದ್ಧ ತಂತ್ರ ಅನುಸರಿಸಿ ಶತ್ರುಗಳ ಮೇಲೆ ಜಯ ಸಾಧಿಸಿದರು. ನೌಕಾಪಡೆಯ ಅಡಿಪಾಯ ಹಾಕಿ ಸಮುದ್ರ ಭದ್ರತೆಗೆ ಮಹತ್ವ ನೀಡಿದ್ದರು ಎಂದು ತಿಳಿಸಿದರು.
ಸಮುದಾಯದ ಮುಖಂಡರಾದ ಶೇಖರ ಮಾನೆ ಮಾತನಾಡಿ ಶಿವಾಜಿ ಮಹಾರಾಜರು ಅವರ ಆಡಳಿತ ಕಾಲದಲ್ಲಿ ಜಾರಿಗೆ ತಂದ ರಾಜನೀತಿಗಳು ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿವೆ. ಅಂದಿನ ಯುದ್ಧ ತಂತ್ರಗಳ ನೀತಿ ಇಟ್ಟುಕೊಂಡೇ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ ಎಂದರು.
ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಅತಿಥಿ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ವಾಸುದೇವ ಸ್ವಾಮಿ ಸಮುದಾಯದ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.
ಭಾವಚಿತ್ರದ ಭವ್ಯ ಮೆರವಣಿಗೆ:ಚತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಜಿಲ್ಲಾಡಳಿತ ಭವನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವೆರೆಗೆ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮೆರವಣಿಗೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಓ ಶಶಿಧರ ಕುರೇರ, ಎಸ್ಪಿ ಸಿದ್ದಾರ್ಥ ಗೋಯಲ್ ಸಮದಾಯದ ಮುಖಂಡರು ಪಾಲ್ಗೊಂಡಿದ್ದರು.