ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರದ ಇತಿಹಾಸ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರಾಣಿಕ ನಾಯಕರಲ್ಲೊಬ್ಬರು. ಮೊಘಲರು ಹಾಗೂ ಬ್ರಿಟಿಷರ ದೌರ್ಜನ್ಯ, ದುರಾಡಳಿತದ ವಿರುದ್ಧ ಸೆಟೆದು ನಿಂತ ಮಹಾನ್ ಸಮಾಜ ಸುಧಾರಕ, ಜೊತೆಗೆ ಆದರ್ಶ ಆಡಳಿತಗಾರ ಕೂಡ ಹೌದು ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಯರಗೇರಾ ಸಮೀಪದ ರಾಯಚೂರು ವಿಶ್ವವಿದ್ಯಾಲಯದ ಕೃಷ್ಣತುಂಗಾ ಸಂಭಾಂಗಣದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಧೈರ್ಯ, ಸಾಹಸವನ್ನು ಮೆರೆಯುವ ಮೂಲಕ ಆತ್ಮಾಭಿಮಾನದಿಂದ ಸ್ವಾತಂತ್ರ್ಯ ಹೊಂದಲು ಜನರನ್ನು ಪ್ರೇರೇಪಿಸಿದರು. ತಾವು ಗೆದ್ದು ಆಡಳಿತಕ್ಕೆ ಬಂದ ನಂತರ ಪ್ರಗತಿಪರ-ಜನಪರ, ನ್ಯಾಯ-ಸಮಾನತೆಯುಳ್ಳ ಜವಾಬ್ದಾರಿಯುತ ಸಮಾಜವನ್ನು ಸ್ಥಾಪಿಸಿದರು. ಇದೇ ಕಾರಣಕ್ಕೆ ಶಿವಾಜಿ ಮಹಾರಾಜರು ಯುಗದ ಶ್ರೇಷ್ಠ ನಾಯಕರಾಗಿದ್ದಾರೆ ಎಂದು ಹೇಳಿದರು.ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ರಾಘವೇಂದ್ರ ಫತೇಪುರ್ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಯುದ್ಧ ಕೌಶಲಗಳು (ಮಿಲಿಟರಿ ಕಲೆ) ಮತ್ತು ಧೈರ್ಯ-ಸಾಹಸಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಸ್ತಾರವಾದ ಸಾಮ್ರಾಜ್ಯ, ಸಮುದ್ರ ವ್ಯಾಪಾರ ಮತ್ತು ನೌಕಾಪಡೆ, ಶ್ರೇಷ್ಠ ಧಾರ್ಮಿಕ ತತ್ವಗಳು ಜೊತೆಗೆ ಮಾನವತಾ ವಾದದಡಿಯ ಜನಾನುರಾಗಿ ಆಡಳಿತಕ್ಕೆ ಕೂಡ ಅವರು ಹೆಸರಾಗಿದ್ದಾರೆ ಎಂದು ತಿಳಿಸಿದರು.
ಕುಲಸಚಿವ ಪ್ರೊ. ವಿಶ್ವನಾಥ್.ಎಂ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಜಿ.ಎಸ್.ಬಿರಾದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇತಿಹಾಸ ಮತ್ತು ಪುರಾತತ್ವ ವಿಭಾಗದ ವಿಭಾಗದ ಉಪನ್ಯಾಸಕಿ ಡಾ. ಪದ್ಮಜಾ ದೇಸಾಯಿ ನಿರೂಪಿಸಿದರು. ಕಲಾ ನಿಕಾಯಗಳ ಡೀನ್ ಪ್ರೊ. ಪಾರ್ವತಿ.ಸಿ.ಎಸ್, ವಿಜ್ಞಾನ ನಿಕಾಯಗಳ ಡೀನ್ ಪ್ರೊ. ಭಾಸ್ಕರ್. ಪಿ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ನಗರದಾದ್ಯಂತ ಶಿವಾಜಿ ಜಯಂತಿ ಸಂಭ್ರಮ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕು, ಹೋಬಳಿಗಳಲ್ಲಿ ಅದ್ಧೂರಿಯಾಗಿ ಸೋಮವಾರ ಆಚರಿಸಲಾಯಿತು.
ಜಿಲ್ಲಾಡಳಿತ, ಆಯಾ ತಾಲೂಕಾಡಳಿತದಿಂದ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಭಾವಚಿತ್ರದ ಮೆರವಣಿಗೆ: ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಛತ್ರಪತಿ ಶಿವಾಜಿ ಮಹರಾಜರ ಜಯಂತಿ ನಿಮಿತ್ತ ನಗರದಲ್ಲಿ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ನಂತರ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ದೇವದುರ್ಗದ ಸಾಹಿತಿ ಶಂಕರರಾವ್ ಉಬಾಳೆ ಅವರು ಉಪನ್ಯಾಸ ನೀಡಿದರು.ಕಾರ್ಯಕ್ರಮಕ್ಕೂ ಮೊದಲು ನಗರದ ಖಾಸಭಾವಿಯ ಹತ್ತಿರದ ಛತ್ರಪತಿ ಶಿವಾಜಿ ವೃತ್ತದಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ತಹಸೀಲ್ದಾರ್ ಸುರೇಶ ವರ್ಮಾ, ಸಮಾಜದ ಮುಖಂಡರಾದ ಹನುಮಂತಪ್ಪ, ಭೀಮರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.