ಇಂದು ಶಿವಕುಮಾರ ಶ್ರೀಗಳ 117ನೇ ಜಯಂತಿ

| Published : Apr 01 2024, 12:51 AM IST / Updated: Apr 01 2024, 06:34 AM IST

ಸಾರಾಂಶ

ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತಿವೆತ್ತ ಸಿದ್ದಗಂಗೆಯ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವ ಸೋಮವಾರ ಸಿದ್ದಗಂಗಾ ಮಠದಲ್ಲಿ ನಡೆಯಲಿದೆ.

 ತುಮಕೂರು :  ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತಿವೆತ್ತ ಸಿದ್ದಗಂಗೆಯ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವ ಸೋಮವಾರ ಸಿದ್ದಗಂಗಾ ಮಠದಲ್ಲಿ ನಡೆಯಲಿದೆ.

ಶ್ರೀಮಠದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಪತಂಜಲಿ ಯೋಗಪೀಠದ ಬಾಬಾ ರಾಮದೇವ್ ಉದ್ಘಾಟಿಸಲಿದ್ದಾರೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮುಂಡರಗಿ ಅನ್ನದಾನೇಶ್ವರ ಮಠಾಧ್ಯಕ್ಷ ಡಾ.ಅನ್ನದಾನೇಶ್ವರ ಸ್ವಾಮೀಜಿ, ಧಾರವಾಡ ಶ್ರೀ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಶ್ರೀ ಕಲ್ಲಯ್ಯ ಅಜ್ಜನವರು, ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.

ಸಿದ್ದಗಂಗಾ ಮಠದಲ್ಲಿ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ ನೀಡುವುದು ಶ್ರೀಗಳ ಪರಮ ಧ್ಯೇಯ. ಹಾಗಾಗಿ ೬ ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಒಂದೇ ಬಾರಿಗೆ 30 ಸಾವಿರ ಮಂದಿ ಭಕ್ತರು ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ದಾಸೋಹ ನಡೆಯಲಿದೆ. ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿ ಬಾತ್, ಕಾಫಿ, ಟೀ ಇರುತ್ತದೆ. ಮಧ್ಯಾಹ್ನ ಊಟಕ್ಕೆ ಸಿಹಿಬೂಂದಿ, ಖಾರ ಬೂಂದಿ, ಹಪ್ಪಳ, ಉಪ್ಪಿನಕಾಯಿ, ಮಜ್ಜಿಗೆ, ಪಲ್ಯ, ಪಾಯಸ, ಚಿತ್ರಾನ್ನ, ಅನ್ನ ಸಾಂಬರು ಇರುತ್ತದೆ.

ಶ್ರೀಗಳ ಪ್ರತಿಮೆ ಉತ್ಸವ: ಬೆಳಗ್ಗೆ 8 ಗಂಟೆಗೆ ಶ್ರೀಗಳ ಪ್ರತಿಮೆ ಉತ್ಸವ ಶ್ರೀಮಠದ ಆವರಣದಲ್ಲಿ ನಡೆಯಲಿದೆ. ನಂತರ ಶ್ರೀಗಳ ಜಯಂತಿಗೆ ಆಗಮಿಸುವ ಅತಿಥಿಗಳನ್ನು ಪೂರ್ಣಕುಂಭದೊಂದಿಗೆ ಕಾರ್ಯಕ್ರಮದ ವೇದಿಕೆಗೆ ಕರೆದೊಯ್ಯಲಾಗುವುದು.