ಬಸವೇಶ್ವರ ದೇವಾಲಯದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ, ಗುರುವಂದನಾ ಸಮಾರಂಭ

| Published : Apr 04 2024, 01:07 AM IST

ಬಸವೇಶ್ವರ ದೇವಾಲಯದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ, ಗುರುವಂದನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗು ವೀರಶೈವ ಸಮಾಜದ ಆಶ್ರಯದಲ್ಲಿ ಸೋಮವಾರಪೇಟೆ ಬಸವೇಶ್ವರ ದೇವಾಲಯದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ ಮತ್ತು ಗುರುವಂದನೆ ನಡೆಯಿತು. ದೇವಾಲಯದ ಅರ್ಚಕ ಮೋಹನ ಮೂರ್ತಿ ಪೌರೋಹಿತ್ಯದಲ್ಲಿ ಅರ್ಚನೆ ಹಾಗೂ ಮಹಾಮಂಗಳಾರತಿ, ದಾಸೋಹ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಿದ್ದಗಂಗಾ ಮಠದ ಕೊಡುಗೆ ಅಪಾರ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ತಿಲೋತ್ತಮೆ ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗು ವೀರಶೈವ ಸಮಾಜದ ಆಶ್ರಯದಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತಿ ಮತ್ತು ಗುರುವಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿಯೇ ಗಮನ ಸೆಳೆದಿರುವ ಸಿದ್ದಗಂಗಾ ಕ್ಷೇತ್ರ ಇಂದು ಜನಸಾಮಾನ್ಯರ ಬಾಳಿನ ಆಶಾಕಿರಣವಾಗಿದೆ, ಜಾತಿ, ಮತ ಭೇದವಿಲ್ಲದೆ ಬಡವ, ಬಲ್ಲಿದನೆಂಬ ತಾರತಮ್ಯವಿಲ್ಲದೆ ಪ್ರತಿವರ್ಷ 10-15 ಸಾವಿರ ವಿಧ್ಯಾರ್ಥಿಗಳಿಗೆ ವಿದ್ಯೆ, ವಸತಿ, ಆಹಾರಗಳೆಂಬ ತ್ರಿವಿಧ ದಾಸೋಹ ನೀಡುತ್ತಿದೆ ಎಂದರು.

ಅಂದು ಪೂಜ್ಯ ಶಿವಕುಮಾರ ಸ್ವಾಮೀಜಿ ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಎತ್ತಿ ಕಷ್ಟಪಟ್ಟು ಕಟ್ಟಿದ ಮಠ ಇಂದು ಹೆಮ್ಮರವಾಗಿ ಬೆಳೆದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜಕ್ಕೆ ಆಶ್ರಯ ನೀಡುತ್ತಿರುವುದು ಇಂದಿನ ಜನಾಂಗ ಕೃತಜ್ಞತೆಯಿಂದ ಸ್ಮರಿಸಿ ಕೊಳ್ಳಬೇಕಾಗಿದೆ ಎಂದರು

ಮಕ್ಕಳಲ್ಲಿಯೇ ದೇವರನ್ನು ಕಾಣುತ್ತಿದ್ದ ಶಿವಕುಮಾರ ಸ್ವಾಮೀಜಿ ಮಕ್ಕಳ ಮಧ್ಯಾಹ್ನದ ಊಟದ ನಂತರವೇ ತನ್ನ ಸಾವಿನ ಸುದ್ದಿ ತಿಳಿಸಬೇಕು ಎಂದು ಹೇಳಿದ್ದು ಅವರಿಗೆ ಮಕ್ಕಳ ಮೇಲಿದ್ದ ಮಮತೆಯನ್ನು ತೋರಿಸುತ್ತದೆ ಎಂದರು.

ಶಿವಕುಮಾರ ಸ್ವಾಮೀಜಿಗಳಂತೆಯೆ 12ನೇ ಶತಮಾನದಲ್ಲಿ ಅನೇಕ ಶಿವಶರಣರು ಈ ನಾಡಿನ ಸಂಸ್ಕೃತಿ, ನಾಡು, ನುಡಿ ಹಾಗೂ ಜನಜೀವನ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರನ್ನು ಸ್ಮರಿಸಬೇಕಾಗಿದೆ ಎಂದರು.

ವೀರಶೈವ ಸಮಾಜದ ಯಜಮಾನ ಶಿವಕುಮಾರ್ ಹಾಗೂ ಹಿರಿಯರಾದ ಕಲಾ ಸದಾನಂದ್ ತಿಲೋತ್ತಮೆ ಅವರಿಗೆ ಗೌರವ ಸಮರ್ಪಿಸಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಸಮಾಜದ ಶೆಟ್ರು ಜಯಣ್ಣ, ಕಾರ್ಯದರ್ಶಿ ನಾಗರಾಜ್, ಅಕ್ಕನ ಬಳಗದ ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ವೀರಶೈವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಹಾಜರಿದ್ದರು.

ದೇವಾಲಯದ ಅರ್ಚಕ ಮೋಹನ ಮೂರ್ತಿ ಪೌರೋಹಿತ್ಯದಲ್ಲಿ ಅರ್ಚನೆ ಹಾಗೂ ಮಹಾಮಂಗಳಾರತಿ, ನಂತರ ದಾಸೋಹ ನಡೆಯಿತು.