ಸಾರಾಂಶ
ದೊಡ್ಡಬಳ್ಳಾಪುರ: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಚಿಂತನೆಗಳು ಮತ್ತು ಬದುಕಿನ ಆದರ್ಶಗಳನ್ನು ಪಾಲಿಸುವುದರಿಂದ ಸದೃಢ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅನ್ನದಾಸೋಹ, ಪೂಜಾ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಶೈಕ್ಷಣಿಕ, ಸಾಮಾಜಿಕ ಪ್ರಗತಿಗೆ ಶಿವಕುಮಾರ ಸ್ವಾಮೀಜಿ ಅವರ ಕೊಡುಗೆ ಅನನ್ಯವಾಗಿದ್ದು, ಅವರ ಹೆಸರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಾಮಕರಣ ಮಾಡುವ ಕುರಿತು ಚಿಂತನೆ ನಡೆಸುವುದು ಸೂಕ್ತ ಎಂದರು.ಗಣ್ಯರು, ಅಂತರಂಗ ಶುದ್ಧಿಗೆ ಒತ್ತು ನೀಡಿದಾಗ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ. ಆತ್ಮಸಾಕ್ಷಿಗೆ ಪೂರಕರವಾಗಿ ನಡೆಯುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಬೇಕು ಎಂಬುದನ್ನು ಡಾ. ಶಿವಕುಮಾರ ಸ್ವಾಮೀಜಿ ಅವರು ತಮ್ಮ ಬದುಕಿನ ಮೂಲಕ ತಿಳಿಸಿದ್ದಾರೆ ಎಂದರು.
ಆಧ್ಯಾತ್ಮಿಕ ಚಿಂತನೆಗಳು ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಹೆಚ್ಚಿಸಿವೆ. ಸಮಾಜದ ಹಿತ ಹಾಗೂ ಇತರರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಗುಣಧರ್ಮ ಅಗತ್ಯ. ಕರ್ನಾಟಕದ ಶರಣ ಪರಂಪರೆ ಸಾಮಾಜಿಕ ಜಾಗೃತಿಯ ಜೊತೆಗೆ ಸಮನ್ವಯ ಹಾಗೂ ಸಹಬಾಳ್ವೆಯ ಪಾಠವನ್ನೂ ಕಲಿಸಿದೆ ಎಂದು ಹೇಳಿದರು.ಕಾರ್‍ಯಕ್ರಮದಲ್ಲಿ ನಿಶ್ಚಲ ನಿರಂಜನಾನಂದ ಸ್ವಾಮೀಜಿ, ವೀರಶೈವ ಸಂಘದ ಅಧ್ಯಕ್ಷ ಸೋಮರುದ್ರಶರ್ಮ, ಕೊಂಗಾಡಿಯಪ್ಪ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಪ್ರಕಾಶ್, ಜಿಪಂ ಮಾಜಿ ಸದಸ್ಯ ಎ.ನರಸಿಂಹಯ್ಯ, ನಗರಸಭೆ ಸದಸ್ಯ ಬಂತಿ ವೆಂಕಟೇಶ್, ಸಮುದಾಯದ ಮುಖಂಡರಾದ ಪುಷ್ಪಾ ಶಿವಶಂಕರ್, ಲತಾ ಆರಾಧ್ಯ, ಬಸವರಾಜು, ಕೆ.ಮಹಾಲಿಂಗಯ್ಯ, ಸತೀಶ್, ಸುಜಯ್, ಮುತ್ತಣ್ಣ, ಗಗನ್, ಲೋಕೇಶ್, ಮಹದೇವ್, ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.21ಕೆಡಿಬಿಪಿ3-
ದೊಡ್ಡಬಳ್ಳಾಪುರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ 5ನೇ ಪುಣ್ಯಸ್ಮರಣೆ ಕಾರ್‍ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್, ನಿಶ್ಚಲ ನಿರಂಜನ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.