ಚನ್ನಪಟ್ಟಣದಿಂದ ಡಿಕೆಶಿ ರಾಜಕೀಯ ಅಧ್ಯಾಯಅಂತ್ಯವಾಗಬಹುದು: ಯೋಗಿ

| Published : Jun 21 2024, 01:03 AM IST

ಚನ್ನಪಟ್ಟಣದಿಂದ ಡಿಕೆಶಿ ರಾಜಕೀಯ ಅಧ್ಯಾಯಅಂತ್ಯವಾಗಬಹುದು: ಯೋಗಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಅಧ್ಯಾಯವೇ ಮುಕ್ತಾಯವಾದರೂ ಅಚ್ಚರಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.

7-8 ಸಾವಿರ ಹೊಸ ಮತದಾರ ಸೇರಿಸಲು ಡಿಕೆಶಿ ಸೂಚಿಸಿದ್ದಾರೆ

ಕನ್ನಡಪ್ರಭ ವಾರ್ತೆ ರಾಮನಗರ

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಅಧ್ಯಾಯವೇ ಮುಕ್ತಾಯವಾದರೂ ಅಚ್ಚರಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣ ಕ್ಷೇತ್ರದಿಂದ ಹೊಸ ರಾಜಕೀಯ ಅಧ್ಯಾಯ ಆರಂಭವಾದರೂ ಆಗಬಹುದು ಅಥವಾ ರಾಜಕೀಯ ಅಧ್ಯಾಯ ಮುಕ್ತಾಯವಾದರೂ ಆಗಬಹುದು. ಕಾದು ನೋಡಿ ಎಂದರು.

ಡಿ.ಕೆ.ಶಿವಕುಮಾರ್ ಸುಧೀರ್ಘ ರಾಜಕೀಯ ಜೀವನದ ಮುಸ್ಸಂಜೆಯಲ್ಲಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು. ಈಗ ಬೇಲ್ ಮೇಲಿದ್ದು, ರಾಜಕೀಯದ ಕೊನೆ ಪುಟದಲ್ಲಿದ್ದಾರೆ. ಕಾಂಗ್ರೆಸ್ ಶಾಸಕರು ಹಾಗೂ ಸಿದ್ದರಾಮಯ್ಯರವರ ವಿಶ್ವಾಸ ಪಡೆದರೆ ನಾಳೆಯೇ ಮುಖ್ಯಮಂತ್ರಿ ಆಗಬಹುದು. ಕ್ಷೇತ್ರ ಬದಲಾಯಿಸಿದ ಮಾತ್ರಕ್ಕೆ ಮುಖ್ಯಮಂತ್ರಿ ಆಗುತ್ತಾರೆ ಎಂಬುದೆಲ್ಲ ಭ್ರಮೆ ಎಂದು ಟೀಕಿಸಿದರು.

ಡಿ.ಕೆ.ಸುರೇಶ್ ರವರು ಸೋಲು ಡಿ.ಕೆ.ಶಿವಕುಮಾರ್ ರವರಿಗೆ ಹತಾಶೆ ತಂದಿದೆ. ಆ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಚನ್ನಪಟ್ಟಣದ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಧಮ್ಕಿ ಹಾಕಿದ್ದಾರೆ. ಒಂದೇ ಸಮುದಾಯದ 7-8ಸಾವಿರ ಮತಗಳನ್ನು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮ ಮಾರ್ಗದಲ್ಲಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲ್ಲಲು ಬರುತ್ತಿದ್ದಾರೆ. ಈ ವಾಮಮಾರ್ಗಕ್ಕೆ ಕಾನೂನು ರೀತಿ ಕಡಿವಾಣ ಹಾಕಿಸಲು ನಾವು ಸನ್ನದ್ಧರಾಗಿದ್ದೇವೆ. ಡಿ.ಕೆ.ಸುರೇಶ್ ಇಲ್ಲಿ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ ಅವರೇ ಸ್ಪರ್ಧೆ ಮಾಡುತ್ತಿದ್ದಾರೆಂದರೆ ಬೇರೆಯವರು ಗೆಲ್ಲುವುದಿಲ್ಲ ಎಂಬುದು ಸಾಬೀತಾಯಿತು ಎಂದರು.-ಬಾಕ್ಸ್‌-

ಉಪ ಚುನಾವಣೆ ಸ್ಪರ್ಧೆ ವಿಚಾರದಲ್ಲಿ

ವರಿಷ್ಠರ ತೀರ್ಮಾನಕ್ಕೆ ಬದ್ಧ: ಸಿಪಿವೈ

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪೈಕಿ ಯಾವುದಾದರು ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಲು ತಮಗೆ ಅಭ್ಯಂತರ ಇಲ್ಲ. ಈ ವಿಚಾರದಲ್ಲಿ ಉಭಯ ಪಕ್ಷಗಳ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಎನ್ನುವ ಮೂಲಕ ಸಿ.ಪಿ.ಯೋಗೇಶ್ವರ್ ತಾವು ಆಕಾಂಕ್ಷಿ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

ಉಭಯ ಪಕ್ಷಗಳ ವರಿಷ್ಠರು ಚರ್ಚಿಸಿ ತೀರ್ಮಾನ ಮಾಡಿ ಯಾವುದೇ ಚಿಹ್ನೆಯಲ್ಲಿ ಸ್ಪರ್ಧಿಸಲು ಹೇಳಿದರೂ ಅಭ್ಯಂತರ ಇಲ್ಲ. ಯಾರನ್ನೇ ಅಭ್ಯರ್ಥಿ ಮಾಡಿದರೂ ವಿರೋಧವೂ ಇಲ್ಲ. ಅಭ್ಯರ್ಥಿ ಆಯ್ಕೆ ವರಿಷ್ಠರಿಂದ ಆಗಬೇಕಿದೆ. ಅದರಲ್ಲೂ ಕೇಂದ್ರ ಸಚಿವ ಕುಮಾರಸ್ವಾಮಿ ತೀರ್ಮಾನ ಕೂಡ ಮುಖ್ಯ. ವೈಯಕ್ತಿಕವಾಗಿ ನಾನು ಆಕಾಂಕ್ಷಿ ಅಂತಲೂ ಹೇಳುವುದಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಣಯದ ವಿರುದ್ಧ ಹೋಗುವುದಿಲ್ಲ ಎಂದರು.