ಇತ್ತೀಚೆಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಶಾಸಕ ಶಿವಲಿಂಗೇಗೌಡರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನೀಡಿರುವ ಸವಾಲನ್ನು ಸ್ವೀಕರಿಸುತ್ತೇವೆ. 2028 ರಲ್ಲಿ ಅವರಿಗೆ ಸೋಲು ಖಚಿತ ಎಂದು ಜೆಡಿಎಸ್ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಮತ್ತು ಜಿಪಂ ಮಾಜಿ ಸದಸ್ಯ ಅಶೋಕ್ ವಾಗ್ದಾಳಿ ನಡೆಸಿದರು.
ಕನ್ನಡಪ್ರಭವಾರ್ತೆ ಹಾಸನ
ಇತ್ತೀಚೆಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಶಾಸಕ ಶಿವಲಿಂಗೇಗೌಡರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನೀಡಿರುವ ಸವಾಲನ್ನು ಸ್ವೀಕರಿಸುತ್ತೇವೆ. 2028 ರಲ್ಲಿ ಅವರಿಗೆ ಸೋಲು ಖಚಿತ ಎಂದು ಜೆಡಿಎಸ್ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಮತ್ತು ಜಿಪಂ ಮಾಜಿ ಸದಸ್ಯ ಅಶೋಕ್ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಅರಸೀಕೆರೆ ಕ್ಷೇತ್ರದ ಶಾಸಕರ ಸವಾಲನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದೇವೆ. ಅವರ ಪ್ರತಿಯೊಂದು ರಾಜಕೀಯ ತಂತ್ರಕ್ಕೂ ಪ್ರತಿತಂತ್ರ ರೂಪಿಸಲು ನಾವು ಸಿದ್ಧರಾಗಿದ್ದೇವೆ. ರೇವಣ್ಣ ಅವರ ಮನೆಯಲ್ಲಿ ಊಟ ಮಾಡಿಕೊಂಡು ನಂತರ ಅವರ ವಿರುದ್ಧ ಮಾತನಾಡುವುದು ಶಾಸಕ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. 2008 ರಲ್ಲಿ ನೀವು ಶಾಸಕರೂ ಅಲ್ಲ. ಆಗ ಖಾರ ಬಿಸ್ಕೆಟ್, ಟವಲ್ ಕೊಟ್ಟು ರಾಜಕೀಯ ನಡೆಸಿದ್ದೀರಿ. 15 ವರ್ಷ ಶಾಸಕರಾಗಿದ್ದರೂ ಕ್ಷೇತ್ರಕ್ಕೆ ಶೋಭೆ ತರಲಿಲ್ಲ. 2028 ರಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಶಾಸಕರಾಗಿ ಕಳೆದ 15 ವರ್ಷಗಳ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲಿ. ಕಳೆದ ಎರಡುವರೆ ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನೂ ಜನತೆಗೆ ತಿಳಿಸಲಿ. ಚಿಕ್ಕ ತಿರುಪತಿ ರಾಜಗೋಪುರ ಆರು ವರ್ಷಗಳಿಂದ ಉದ್ಘಾಟನೆ ಆಗಿಲ್ಲ, ಪಿಎಂ ಆವಾಸ್ ಯೋಜನೆ ಲಾಟರಿ ಹಂತದಲ್ಲೇ ನಿಂತಿದೆ ಎಂದು ಆರೋಪಿಸಿದರು. ನಿಮ್ಮ 20 ವರ್ಷಗಳ ಆಸ್ತಿ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.ಜೆಡಿಎಸ್ ಮುಖಂಡ ಅಶೋಕ್ ಮಾತನಾಡಿ, 2006 ರ ಬಾಣಾವರ ಗ್ರಾಪಂ ಚುನಾವಣೆಯಲ್ಲಿ ಜಿವಿ ಸಿದ್ದಪ್ಪ ಹಾಗೂ ಜಯಣ್ಣ ಬಂದಾಗ ಶಿವಲಿಂಗೇಗೌಡರು ಎದ್ದು ನಿಲ್ಲುತ್ತಿದ್ದ ದಿನಗಳು ಇವೆ. ಇಡೀ ತಾಲೂಕಿನಲ್ಲಿ ಸಮುದಾಯ ಭವನಗಳ ನಿರ್ಮಾಣ ದೇವೇಗೌಡರ ಮಾರ್ಗದರ್ಶನದಲ್ಲೇ ನಡೆದಿದೆ. ಸ್ವಶಕ್ತಿಯಿಂದ ಏನೂ ಮಾಡದವರು ಇಂದು ಶಾಸಕ ಆಗಿದ್ದಾರೆ. ಜವರೇಗೌಡರ ಮಾತಿಗೆ ಗೌರವ ನೀಡಿ ದೇವೇಗೌಡರು ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 1000 ಮತಗಳ ಅಂತರದಲ್ಲಿದ್ದರೂ ಜೆಡಿಎಸ್‌ಗೆ ನೀವು ಅನಿವಾರ್ಯ ಅಲ್ಲ. ನಿಮಗೆ ಜೆಡಿಎಸ್ ಅನಿವಾರ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಪ್ಪ, ನಿರ್ದೇಶಕರಾದ ಹೊಸೂರು ಗಂಗಣ್ಣ, ಗಂಡಸಿ ಮಂಜಣ್ಣ, ಹಿಂದುಳಿದ ವರ್ಗಗಳ ಮುಖಂಡ ಕೇಶವಮೂರ್ತಿ, ನಗರಸಭೆ ಮಾಜಿ ಸದಸ್ಯ ಹರ್ಷವರ್ಧನ್ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.