ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರಕ್ಕೆ ಟ್ರಕ್ ಟರ್ಮಿನಲ್(ಲಾರಿ ನಿಲ್ದಾಣ) ಬೇಕು ಎಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಎ. ತಲ್ಕೀನ್ ಅಹ್ಮದ್ ಆಗ್ರಹಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಲಾರಿ ಮತ್ತು ಇತರ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಲಾರಿಗಳಿವೆ. ಈ ಲಾರಿಗಳನ್ನು ನಿಲ್ಲಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಭಾರಿ ಪ್ರಾದೇಶಿಕ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಲಾರಿ ನಿಲ್ಲಿಸಲು ಜಾಗಕೊಡಿ ಎಂದು ಕೇಳಿದ್ದೇವೆ. ಆದರೂ ಕೂಡ ಶಿವಮೊಗ್ಗ ನಗರದಲ್ಲಿ ಇದೂವರೆಗೂ ಲಾರಿ ಪಾರ್ಕಿಂಗ್ ಆಗಿಲ್ಲ ಎಂದು ದೂರಿದರು.
ಲಾರಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿಯಿದೆ ಇದರಿಂದ ಲಾರಿ ಕಳ್ಳತನವೂ ಆಗುತ್ತದೆ. ಜೊತೆಗೆ ಲಾರಿಯಲ್ಲಿರುವ ವಸ್ತುಗಳ ಕಳ್ಳತನವೂ ಆಗುತ್ತದೆ. ಮತ್ತು ಪೊಲೀಸರ ಕಾಟವೂ ಇದೆ. ಈ ಎಲ್ಲಾ ದೃಷ್ಟಿಯಿಂದ ಲಾರಿ ಪಾರ್ಕಿಂಗ್ ಬೇಕಾಗಿದೆ. ಈ ಹಿಂದೆ ತೇವರಚಟ್ನಹಳ್ಳಿಯಲ್ಲಿ ಜಾಗ ಗುರುತಿಸಿದ್ದರು. ಆದರೆ ಅದು ಏನಾಯಿತೆಂದು ಗೊತ್ತಾಗಲಿಲ್ಲ. ಯಾವ ಸರ್ಕಾರವೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಈಗಲಾದರೂ ಸರ್ಕಾರ ಅಥವಾ ಜಿಲ್ಲಾಡಳಿತ ತಕ್ಷಣವೇ ನಗರದ ಟ್ರಕ್ ಟರ್ಮಿನಲ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಲಾರಿ ಮಾಲೀಕರ ಸಂಘದಲ್ಲಿ11ಜನ ಕಾರ್ಯಕಾರಿ ಸಮಿತಿ ಇತ್ತು. ಕೆಲವರು ಈಗ ನಿಧನರಾಗಿದ್ದಾರೆ. ಮತ್ತೆ ಕೆಲವರು ತಟಸ್ಥರಾಗಿದ್ದಾರೆ. ಆದ್ದರಿಂದ ಹೊಸ ಸಮಿತಿ ರಚಿಸಬೇಕಾಗಿದೆ. ಸಂಘದಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರು ತಮ್ಮ ವಾಹನಗಳ ಆರ್.ಸಿ. ಬುಕ್ ಮತ್ತು ಆಧಾರ್ ಕಾರ್ಡ್ ಹಾಗೂ ಫೋಟೋ ಜೊತೆ ಅರ್ಜಿ ಸಲ್ಲಿಸಿ, ಸದಸ್ಯತ್ವ ಪಡೆಯಬಹುದು.
ಶಿವಮೊಗ್ಗ ನಗರದವರು ಶಂಕರ ಮಠದ ಹತ್ತಿರವಿರುವ ಸಂಘದ ಕಛೇರಿಗೆ ಬಂದು ಅರ್ಜಿ ಸಲ್ಲಿಸಬಹುದು. ಪ್ರತಿ ತಾಲೂಕಿನ ಅಧ್ಯಕ್ಷರು ಆಯಾ ತಾಲೂಕಿನ ಲಾರಿ ಮಾಲೀಕರ ಸದಸ್ಯತ್ವವನ್ನು ನೊಂದಾಯಿಸಿಕೊಳ್ಳಬೇಕು ಎಂದರು.ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೆ.ಎನ್. ಭೋಜರಾಜ್, ರಾಜಣ್ಣ, ಶಿವಣ್ಣ, ಬಾಬು, ವಿನಯ್, ಅಬೀಬ್ ಮುಂತಾದವರಿದ್ದರು.