ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಾದದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಿವಮೊಗ್ಗ : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಾದದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಿವಮೊಗ್ಗದ ಆಲ್ಕೊಳ ಬಳಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಹಣ ಪಡೆದು ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡಲಾಗಿದೆ. ಒಂದು ವಿಷಯಕ್ಕೆ ₹1000 ನೀಡಿದ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಪುಸ್ತಕ ನೋಡಿ ಪರೀಕ್ಷೆ ಬರೆಯಲು ಪ್ರಾದೇಶಿಕ ನಿರ್ದೇಶಕರ ನೇತೃತ್ವದಲ್ಲೇ ವಿಐಪಿ ವ್ಯವಸ್ಥೆ ಮಾಡಲಾಗಿದೆ. ಹಣ ಪಡೆದು ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪುಸ್ತಕ ಹಾಗೂ ಮೊಬೈಲ್ ಬಳಸಿ ಉತ್ತರ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಆರೋಪ ಒಪ್ಪದ ಪ್ರಾದೇಶಿಕ ಕಚೇರಿ
ತಮ್ಮ ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷೆ ವೇಳೆ ನಡೆದಿದೆ ಎನ್ನಲಾದ ನಕಲು ಕುರಿತ ಆರೋಪವನ್ನು ಪ್ರಾದೇಶಿಕ ಕಚೇರಿ ನಿರ್ದೇಶಕ ಬಿ.ಎಂ.ಸ್ವಾಮಿ ಅವರು ನಿರಾಕರಿಸಿದ್ದು, ನಮ್ಮಲ್ಲಿ ಯಾವುದೇ ಪರೀಕ್ಷಾ ಅಕ್ರಮ ನಡೆಯಲು ಬಿಡಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜೊತೆಗೆ ಮೊಬೈಲ್, ಪುಸ್ತಕ ಬಳಸಿ ಪರೀಕ್ಷೆ ಬರೆಯುತ್ತಿರುವ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಎರಡನೇ ಮಹಡಿಯಲ್ಲಿ ಪುಸ್ತಕ ಮತ್ತು ಮೊಬೈಲ್ ಬಳಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿತ್ತು. ಹಣ ನೀಡದ ವಿದ್ಯಾರ್ಥಿಗಳಿಗೆ ಮೊದಲ ಮಹಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.
70 ರಿಂದ 100 ವಿದ್ಯಾರ್ಥಿಗಳಿಂದ ಹಣ ಪಾವತಿ
ಪ್ರತಿದಿನ ಪರೀಕ್ಷೆ ಮುಗಿದ ತಕ್ಷಣ ಸುಮಾರು 70 ರಿಂದ 100 ವಿದ್ಯಾರ್ಥಿಗಳಿಂದ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಸ್ಥಳದಲ್ಲೇ ಹಣ ಪಾವತಿಸಿಕೊಳ್ಳಲಾಗುತ್ತಿದೆ. ಅ.7 ರಿಂದ ಆರಂಭವಾಗಿರುವ ಮುಕ್ತ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನ.20 ರವರೆಗೆ ನಡೆಯಲಿದೆ. ದಿನರಾತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರಿಶ್ರಮವನ್ನು ಈ ಭ್ರಷ್ಟ ಜಾಲ ಮಣ್ಣುಪಾಲು ಮಾಡುತ್ತಿದೆ. ತಕ್ಷಣವೇ ಉನ್ನತ ಶಿಕ್ಷಣ ಇಲಾಖೆ ಹಾಗೂ ಕೆಎಸ್‌ಒಯು ಕುಲಪತಿಗಳು ಈ ಕೇಂದ್ರದ ಮೇಲೆ ದಾಳಿ ನಡೆಸಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
