ಧರ್ಮದ ಮೂಲಕ ಜನರ ಭಾವನೆ ಕೆರಳಿಸುತ್ತಿರುವ ಬಿಜೆಪಿ : ಕಿಮ್ಮನೆ

| Published : Apr 23 2024, 09:52 AM IST

KIMmane
ಧರ್ಮದ ಮೂಲಕ ಜನರ ಭಾವನೆ ಕೆರಳಿಸುತ್ತಿರುವ ಬಿಜೆಪಿ : ಕಿಮ್ಮನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಆರ್ಥಿಕ ನೀತಿ, ಬೆಲೆ ಏರಿಕೆ ಸೇರಿ ದೇಶದ ಗಂಭೀರ ವಿಚಾರಗಳಿಗೆ ಆದ್ಯತೆ ನೀಡದ ಬಿಜೆಪಿ, ಕೇವಲ ಜಾತಿ ಧರ್ಮದ ಮೂಲಕ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ತೀರ್ಥಹಳ್ಳಿ :  ದೇಶದ ಆರ್ಥಿಕ ನೀತಿ, ಬೆಲೆ ಏರಿಕೆ ಸೇರಿ ದೇಶದ ಗಂಭೀರ ವಿಚಾರಗಳಿಗೆ ಆದ್ಯತೆ ನೀಡದ ಬಿಜೆಪಿ, ಕೇವಲ ಜಾತಿ ಧರ್ಮದ ಮೂಲಕ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಸೋಮವಾರ ಪಟ್ಟಣದ ಸೊಪ್ಪುಗುಡ್ಡೆ ಬಡಾವಣೆಯಲ್ಲಿ ನನ್ನ ಬೂತ್ ನನ್ನ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮನೆಮನೆಗೆ ಪ್ರಚಾರದ ನಡುವೆ ಮಾಧ್ಯಮದವರೊಂದಿಗೆ ಮಾತನಾಡಿ, ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವಂತೆ ಪ್ರದಾನಿ ನರೇಂದ್ರ ಮೋದಿ ರಾಜಸ್ತಾನದಲ್ಲಿ ಭಾನುವಾರ ನೀಡಿರುವ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಚುನಾವಣೆಯಲ್ಲಿ ಸೋಲು ಖಚಿತವಾಗಿರುವ ಹಿನ್ನೆಲೆ ಬಿಜೆಪಿ ಹತಾಶವಾಗಿದೆ. ಕಾಂಗ್ರೆಸ್ ಗೆದ್ದರೆ ಮಂಗಳ ಸೂತ್ರ ಕಿತ್ತು ಅನ್ಯರಿಗೆ ನೀಡಲಾಗುತ್ತದೆ ಎಂಬ ಮಾತು ಖಂಡನೀಯವಾಗಿದ್ದು ದೇಶದ ಏಕತೆಗೂ ಮಾರಕವಾಗಿದೆ. ಈ ಬಗ್ಗೆ ಪ್ರಧಾನಿಯವರ ವಿರುದ್ಧ ದೂರು ದಾಖಲಿಸಲಾಗುವುದು ತಿಳಿಸಿದರು.

ಬಿಜೆಪಿಯು ಆರ್‌ಎಸ್‍ಎಸ್ ಮಾರ್ಗದರ್ಶನವನ್ನೇ ಪಾಲಿಸುವ ಅಜೆಂಡಾ ಹೊಂದಿದೆ. ಬಿಜೆಪಿ ಸಿದ್ಧಾಂತವೂ ಈ ದೇಶಕ್ಕೆ ಹೊಂದಿಕೆಯಾಗೋದಿಲ್ಲಾ. ಕೇವಲ ಮತಗಳಿಕೆಗಾಗಿ ಪ್ರಧಾನಿ ಸ್ಥಾನದಲ್ಲಿರುವ ಮೋದಿಯವರು ಸಂವಿಧಾನ ವಿರೋಧಿಯಾಗಿ ಮಾತನಾಡಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಿದೆ. ಅದೂ ಕೂಡಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂಥಹ ಹೇಳಿಕೆ ಜನರ ನಡುವಿನ ಬಾಂಧವ್ಯ ಕೆಡಿಸಿ ಅಂತರ ಹೆಚ್ಚಿಸಲು ಪ್ರೇರಣೆ ನೀಡುತ್ತದೆ ಎಂದರು.

50ರ ದಶಕದಿಂದ ಈ ದೇಶದ ಸಮಸ್ತರ ಹಿತಕ್ಕಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷ ಜನಪರವಾಗಿ ತಂದಿರುವ 5 ಗ್ಯಾರಂಟಿ ಯೋಜನೆಗಳ ಮೂಲಕ 1.20ಕೋಟಿ ಕುಟುಂಬಗಳಿಗೆ ಸೌಲಭ್ಯ ನೀಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರು. ನೀಡುವ ಭರವಸೆಯನ್ನೂ ನೀಡಿದೆ ಎಂದರು.

ಬೆಲೆ ಏರಿಕೆ, ಉದ್ಯೋಗ ಸಮಸ್ಯೆ ಬಗ್ಗೆ ಚಕಾರ ಎತ್ತದ ಬಿಜೆಪಿ, ಜಿಎಸ್‍ಟಿ ಮೂಲಕ ಜನರಿಗೆ ತೆರಿಗೆ ಭಾರ ಹೇರಿಕೆ ಮಾಡಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಧಾರಣೆ ಮಾತ್ರವಲ್ಲದೇ ಜೀವನಾವಶ್ಯಕ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಪ್ರಧಾನಿಯಾಗಿ ಹತ್ತು ವರ್ಷಗಳಿಂದ ಒಂದು ಸುದ್ದಿಗೋಷ್ಠಿ ನಡೆಸದ ಮೋದಿ ಬೇಕು ಅನ್ನೋವವರು ಮರುಚಿಂತನೆ ಮಾಡಬೇಕಿದೆ ಎಂದೂ ಹೇಳಿದರು.

ಮುಖಂಡರಾದ ಕೆಸ್ತೂರು ಮಂಜುನಾಥ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಅಮರನಾಥ ಶೆಟ್ಟಿ, ಗೀತಾ ರಮೇಶ್, ರಹಮತ್‍ಉಲ್ಲಾ ಅಸಾದಿ, ಸುಶೀಲಾ ಶೆಟ್ಟಿ, ರಾಘವೇಂದ್ರ ಶೆಟ್ಟಿ ಮುಂತಾದವರು ಇದ್ದರು.