ಸಾರಾಂಶ
ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೆಸರಲ್ಲಿ ಮೂವರು ವೈದ್ಯರಿಗೆ ವಿಷಯುಕ್ತ ಲಡ್ಡು ಕಳುಹಿಸಿದ ಪ್ರಕರಣದ ಹಿಂದೆ ಆರೋಪಿಯ ಲವ್ ಬ್ರೇಕಪ್ ಕಾರಣವಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಶಿವಮೊಗ್ಗ : ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೆಸರಲ್ಲಿ ಮೂವರು ವೈದ್ಯರಿಗೆ ವಿಷಯುಕ್ತ ಲಡ್ಡು ಕಳುಹಿಸಿದ ಪ್ರಕರಣದ ಹಿಂದೆ ಆರೋಪಿಯ ಲವ್ ಬ್ರೇಕಪ್ ಕಾರಣವಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಬಂಧಿತ ಸೌಹಾರ್ದ್ ಪಟೇಲ್, ವಿಚಾರಣೆ ವೇಳೆ ಈ ಸ್ಫೋಟಕ ವಿಷಯ ಹೊರಚೆಲ್ಲಿದ್ದಾನೆ.
ತನ್ನ ಪ್ರೀತಿಗೆ ಅಡ್ಡಿಪಡಿಸಿದರು ಎನ್ನುವ ಕಾರಣಕ್ಕೆ ನಾನು ಮೂವರೂ ವೈದ್ಯರಿಗೆ, ತನಗೆ ಚಿಕಿತ್ಸೆಗೆ ನೀಡಿದ್ದ ಮಾತ್ರೆಯನ್ನೇ ಬೆರೆಸಿದ್ದೆ. ಜೊತೆಗೆ ತಾನು ಸರ್ಜಿ ಅವರ ಅಭಿಮಾನಿಯಾಗಿದ್ದೆ. ಅದೇ ಕಾರಣಕ್ಕೆ ಅವರ ಹೆಸರಲ್ಲೇ ಲಡ್ಡು ಕಳುಹಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೆ ಎಂದು ಮಾನಸಿಕ ಅಸ್ವಸ್ಥ, ಆರೋಪಿ ಪಟೇಲ್ ಹೇಳಿದ್ದಾನೆ.
ಕಾಲೇಜ್ ಲವ್ ಸ್ಟೋರಿ:
ಸೌಹಾರ್ದ್ ಪಟೇಲ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ (ಎನ್‌ಇಎಸ್) ಕಾಲೇಜ್‌ನಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುವಾಗ ವೈದ್ಯರೊಬ್ಬರ ಪುತ್ರಿಯನ್ನು ಪ್ರೀತಿಸಿದ್ದ. ಇದರಿಂದ ಹುಡುಗಿಯ ಕುಟುಂಬದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಈ ವೇಳೆ ಎನ್‌ಇಎಸ್ ಕಾರ್ಯದರ್ಶಿ ನಾಗರಾಜ್ ಮಧ್ಯ ಪ್ರವೇಶಿಸಿ ಇಬ್ಬರ ನಡುವಿನ ಪ್ರೇಮ ಕಹಾನಿ ನಿಲ್ಲಿಸಿದ್ದರು. ಇದೇ ಕಾರಣಕ್ಕೆ ಪಟೇಲ್ ಡಿಪ್ರೆಶನ್‌ಗೆ ಹೋಗಿದ್ದ ಎನ್ನಲಾಗಿದೆ. ಈ ಡಿಪ್ರೆಶನ್‌ಗಾಗಿ ಆತ ಮನೋವ್ಯೆದ್ಯರಾದ ಡಾ.ಪವಿತ್ರಾ ಮತ್ತು ಡಾ.ಅರವಿಂದ್ ಅವರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಈತನ ಮಾನಸಿಕತೆ ಮತ್ತು ವರ್ತನೆಯಿಂದ ಬೇಸತ್ತ ಈತನ ತಂದೆ, ತಾಯಿ ಕೂಡ ಬೇರೆಯಾಗಿ ವಾಸಿಸುತ್ತಿದ್ದರು.
ಮಾತ್ರೆ ನೀಡಿದ್ದಕ್ಕೆ ಕೋಪ:
ತನ್ನ ಲವ್ ಕಹಾನಿಗೆ ಅಡ್ಡಿಯಾದ ಎನ್‌ಇಎಸ್ ಕಾರ್ಯದರ್ಶಿ ನಾಗರಾಜ್ ಮತ್ತು ಮಾನಸಿಕ ವೈದ್ಯರಾದ ಡಾ.ಅರವಿಂದ್ ಮತ್ತು ಡಾ.ಕೆ.ಎಸ್.ಪವಿತ್ರಾ ಅವರು ಅನಗತ್ಯವಾಗಿ ತನಗೆ ಮಾತ್ರೆಯ ಮೇಲೆ ಮಾತ್ರೆ ನೀಡಿದ್ದರಿಂದಲೇ ಮಾನಸಿಕ ಅಸ್ವಸ್ಥನಾದೆ ಎಂದು ಬಲವಾಗಿ ಭಾವಿಸಿದ್ದ ಸೌಹಾರ್ದ ಈ ಮೂವರ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಸರ್ಜಿ ಭಾಷಣಕ್ಕೆ ಅಭಿಮಾನಿಯಾಗಿದ್ದ ಸೌಹಾರ್ದ:
ಈ ದುಷ್ಕೃತ್ಯಕ್ಕೆ ಡಾ.ಧನಂಜಯ ಸರ್ಜಿ ಅವರ ಹೆಸರನ್ನು ಬಳಸಿಕೊಳ್ಳಲು ಕಾರಣ ಬಿಚ್ಚಿಟ್ಟಿದ್ದು ಕೂಡ ಲವ್ ಕಹಾನಿಯಷ್ಟೇ ಕುತೂಹಲಕರವಾಗಿದೆ. ಎಂಎಲ್‌ಸಿ ಧನಂಜಯ ಸರ್ಜಿ ಅವರ ಭಾಷಣದಿಂದ ಆಕರ್ಷಿತನಾಗಿದ್ದ ಸೌಹಾರ್ದ ಅವರ ಅಭಿಮಾನಿಯಾಗಿದ್ದ. ಹೀಗಾಗಿ ಸರ್ಜಿ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸುದೇ ಉತ್ತಮವೆಂದು ಭಾವಿಸಿದ್ದ. ಹಾಗಾಗಿ ಡಾ.ಅರವಿಂದ ಮತ್ತು ಡಾ.ಪವಿತ್ರಾ ನೀಡಿದ್ದ ಮಾತ್ರೆಗಳನ್ನೇ ಪುಡಿ ಮಾಡಿ ಸಿಹಿಯಲ್ಲಿ ಬೆರೆಸಿ ಮೂವರಿಗೂ ಪಾರ್ಸಲ್ ಮಾಡಿದ್ದ.